ಮಂಗಳೂರು: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದರೆ ಬಿಜೆಪಿ ಸೇರಿದ 17 ಶಾಸಕರದ್ದು ನಾಯಿಪಾಡು ಎಂದು ಹೇಳಿಕೆ ಕೊಟ್ಟ ಸಿದ್ದರಾಮಯ್ಯನವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕಟುವಾಗಿ ತಿರುಗೇಟು ನೀಡಿದ್ದಾರೆ.
ಸದ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯನವರದ್ದು ನಾಯಿಪಾಡಾಗಿದೆ. ಅವರು ವಲಸೆ ಬಂದವರು ಎಂಬ ಕಾರಣಕ್ಕೆ ಮೂಲೆಗುಂಪು ಮಾಡಲಾಗುತ್ತಿದೆ ಎಂದು ನಳಿನ್ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ದಿನನಿತ್ಯ ಪ್ರಚಾರ ಮಾಡಲು ಡಿ.ಕೆ.ಶಿವಕುಮಾರ್ ಕೈ ಮೇಲಾಗುತ್ತಿದೆ. ಆ ಹತಾಶೆಯಿಂದ ಹೀಗೆಲ್ಲ ಮಾತನಾಡುತ್ತಿದ್ದಾರೆ. ಅವರೊಬ್ಬ ಮಾಜಿ ಮುಖ್ಯಮಂತ್ರಿ, ಅನುಭವ ಉಳ್ಳವರು ಹೀಗೆಲ್ಲ ಮಾತನಾಡುವುದು ಸರಿಯಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ, ಮಾಧ್ಯಮಗಳಲ್ಲಿ ಸುದ್ದಿಯಲ್ಲಿರಲು ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಎರಡೂ ಕ್ಷೇತ್ರಗಳಲ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಗೆದ್ದ ನಂತರ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು ಎಂದು ನಳಿನ್ ಕುಮಾರ್ ಕುಮಾರ್ ತಿಳಿಸಿದ್ದಾರೆ. ಹಾಗೇ ಪದೇಪದೆ ಸಿಎಂ ವಿರುದ್ಧ ಮಾತನಾಡುತ್ತಿರುವ ಯತ್ನಾಳ್ ಅವರನ್ನು ಕರೆದು ಮಾತನಾಡಲಾಗಿದೆ ಎಂದು ಹೇಳಿದ್ದಾರೆ.