Tuesday, January 21, 2025
ಸುದ್ದಿ

ಕಾಪು ತಾ.ಪಂ ಅಧ್ಯಕ್ಷರಾಗಿ ಬಿಜೆಪಿಯ ಶಶಿಪ್ರಭಾ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ನ ಯು.ಸಿ ಶೇಕಬ್ಬ -ಕಹಳೆ ನ್ಯೂಸ್

ಕಾಪು: ನೂತನ ಕಾಪು ತಾಲೂಕು ಪಂಚಾಯತ್‌ನ ಪ್ರಥಮ ಅಧ್ಯಕ್ಷರಾಗಿ ಬಿಜೆಪಿಯ ಶಶಿಪ್ರಭಾ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಯು.ಸಿ ಶೇಕಬ್ಬ ಉಚ್ಚಿಲ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಗಸ್ಟ್ 10ರಂದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಹೈಕೋರ್ಟ್ ತಡೆಯಾಜ್ಞೆಯ ಹಿನ್ನೆಲೆ ಫಲಿತಾಂಶ ತಡೆಹಿಡಿಯಲಾಗಿತ್ತು. ಬಳಿಕ ಹೈಕೋರ್ಟ್ ನೀಡಿರುವ ಆದೇಶದಂತೆ ಚುನಾವಣಾ ಕುಂದಾಪುರ ಉಪ ವಿಭಾಗ ಅಧಿಕಾರಿ ರಾಜು ಕೆ. ಮಂಗಳವಾರ ಫಲಿತಾಂಶ ಘೋಷಣೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರಕಾರದ ಅಧಿಸೂಚನೆಯಂತೆ ಉಡುಪಿ ತಾಪಂನಿಂದ ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಪು ತಾಪಂ 12 ಸದಸ್ಯ ಬಲವನ್ನು ಹೊಂದಿದೆ. ಇಲ್ಲಿ ಕಾಂಗ್ರೆಸ್ 7 ಹಾಗೂ ಬಿಜೆಪಿಯ 5 ಸದಸ್ಯರಿದ್ದು, ತಾಪಂನ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಬಿ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅದರಂತೆ ಬಿಜೆಪಿಯ ಏಕಮಾತ್ರ ಅಭ್ಯರ್ಥಿ ಶಶಿಪ್ರಭಾ ಶೆಟ್ಟಿ ಆಯ್ಕೆ ಖಚಿತವಾಗಿತ್ತು. ಈ ನಡುವೆ ಹಿಂದುಳಿದ ವರ್ಗ ಅ ಮಹಿಳೆ ಅಭ್ಯರ್ಥಿ ಇಲ್ಲವಾದಲ್ಲಿ ಬಿ ಮಹಿಳೆ ಅಭ್ಯರ್ಥಿ ಆಯ್ಕೆಗೆ ಅವಕಾಶವಿದೆ ಎಂಬ ಚುನಾವಣಾಧಿಕಾರಿ ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಅವರ ನೊಟೀಸ್‌ನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡಾ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತಲ್ಲದೆ, ನೋಟಿಸ್ ವಿಚಾರವಾಗಿ ಕಾಂಗ್ರೆಸ್ ಪಕ್ಷ ಹೈಕೋರ್ಟ್ ಮೆಟ್ಟಿಲೇರಿತ್ತು.

ಸದ್ರಿ ಮೀಸಲಿನಂತೆ ತಾಲೂಕು ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಶಶಿಪ್ರಭಾ ಶೆಟ್ಟಿ ಮತ್ತು ಕಾಂಗ್ರೆಸ್ ನಿಂದ ರೇಣುಕಾ ಪುತ್ರನ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕೇಶವ ಮೊಯ್ಲಿ, ಕಾಂಗ್ರೆಸ್ ನಿಂದ ಯು.ಸಿ.ಶೇಕಬ್ಬ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ರೇಣುಕಾ ಪುತ್ರನ್ ರವರ ನಾಮಪತ್ರ ತಿರಸ್ಕೃತವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಶಶಿಪ್ರಭಾ ಏಕಮಾತ್ರ ಅಭ್ಯರ್ಥಿಯಾಗಿ ಉಳಿದಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಯು.ಸಿ ಶೇಕಬ್ಬ ಹಾಗೂ ಕೇಶವ ಮೊಯ್ಲಿ ಕಣದಲ್ಲಿದ್ದರು. ಯು.ಸಿ ಶೇಕಬ್ಬ 7 ಮತಗಳನ್ನು ಪಡೆದರೆ ಕೇಶವ ಮೊಯ್ಲಿ 5 ಮತಗಳನ್ನು ಪಡೆದಿದ್ದಾರೆ.