ಸೌದಿ ಅರೇಬಿಯಾವು ಬುಧವಾರದಂದು ಮಹತ್ತರವಾದ ಸುಧಾರಣೆ ಘೋಷಣೆ ಮಾಡಲಾಗಿದೆ. ಆ ಮೂಲಕ ಹತ್ತಾರು ಲಕ್ಷ ಮಂದಿ, ಕಡಿಮೆ ಸಂಬಳದ ಮತ್ತು ದುರ್ಬಲ ವರ್ಗದ ಕಾರ್ಮಿಕರಿಗೆ ತಮ್ಮ ಉದ್ಯೋಗದಾತರ ಶೋಷಣೆಯಿಂದ ರಕ್ಷಣೆ ದೊರೆಯಲಿದೆ. ಈ ಬಗ್ಗೆ ಮಾನವ ಸಂಪನ್ಮೂಲ ಹಾಗೂ ಸಮಾಜ ಅಭಿವೃದ್ಧಿ ಇಲಾಖೆ ಸಚಿವಾಲಯ ತಿಳಿಸಿದೆ.
ಇನ್ನು ಮುಂದೆ ಕಾರ್ಮಿಕರು ಒಬ್ಬರಿಂದ ಮತ್ತೊಬ್ಬ ಉದ್ಯೋಗದಾತರಿಗೆ ಪ್ರಾಯೋಜಕತ್ವ ಬದಲಿಸಿಕೊಳ್ಳಬಹುದು. ತಮ್ಮ ಉದ್ಯೋಗದಾತರ ಅನುಮತಿಯ ಅಗತ್ಯ ಇಲ್ಲದೆ ದೇಶವನ್ನು ಬಿಡಬಹುದು ಹಾಗೂ ಮತ್ತೆ ಪ್ರವೇಶಿಸಬಹುದು ಮತ್ತು ಅಂತಿಮವಾಗಿ ತೆರಳುವ ಮುನ್ನ ವೀಸಾ ಪಡೆಯಬಹುದು. ಈ ತನಕ ಎಲ್ಲವೂ ಬೇಕಾಗಿತ್ತು.
ಮುಂದಿನ ವರ್ಷದ ಮಾರ್ಚ್ ನಿಂದ ನಿಯಮ ಜಾರಿಗೆ ಬರಲಿದೆ. ಸೌದಿ ಅರೇಬಿಯಾದ ಒಟ್ಟು ಜನಸಂಖ್ಯೆಯ ಶೇಕಡಾ ಮೂವತ್ತರಷ್ಟು ಅಥವಾ ಒಂದು ಕೋಟಿಯಷ್ಟು ವಲಸಿಗ ಕಾರ್ಮಿಕರಿರಿದ್ದಾರೆ. ಈ ಹೊಸ ನಿಯಮದಿಂದ ಅಷ್ಟು ದೊಡ್ಡ ಪ್ರಮಾಣದ ಜನರ ಮೇಲೆ ಪರಿಣಾಮ ಆಗಲಿದೆ.
ಕಫಾಲ ಪ್ರಾಯೋಜಕತ್ವ ನಿಯಮ, ಅಂದರೆ ವಿದೇಶೀ ಕಾರ್ಮಿಕರು ತಮ್ಮ ಕಾನೂನು ಸ್ಥಾನಮಾನವನ್ನು ಉದ್ಯೋಗದಾತರಿಗೆ ವಹಿಸಿಕೊಡುವುದರಿಂದ ಹಲವು ಅಂಶಗಳನ್ನು ತೆಗೆಯಲಾಗುತ್ತದೆ. ಇದರಿಂದ ಗಲ್ಫ್ ಅರಬ್ ರಾಷ್ಟ್ರದಲ್ಲಿ ಮಹತ್ತರ ಬದಲಾವಣೆ ಆಗಲಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ಅಭಿಪ್ರಾಯ ಪಡುತ್ತಾರೆ.
ಮುಂದಿನ ಎರಡು ವರ್ಷದಲ್ಲಿ ಕತಾರ್ ಫೀಫಾ ಫುಟ್ಬಾಲ್ ಆಯೋಜಿಸುತ್ತಿದೆ. ಅಲ್ಲೂ ಇದೇ ರೀತಿಯ ಕಾರ್ಮಿಕ ಕಾನೂನು ಪರಿಚಯಿಸಲಾಗಿದೆ. ಇನ್ನು ಕಫಾಲ ನಿಯಮಗಳನ್ನು ಸಂಪೂರ್ಣವಾಗಿ ತೆಗೆಯಬೇಕು ಎಂಬುದು ಹಲವರ ಒತ್ತಡವಾಗಿದೆ. ಹೀಗಾದಲ್ಲಿ ಮಾತ್ರ ಕಾರ್ಮಿಕರ ಮೇಲಿನ ಶೋಷಣೆ ನಿಲ್ಲಲಿದೆ ಎಂಬುದು ವಾದವಾಗಿದೆ.