ಜ್ಯುವೆಲ್ಲರಿ ವಂಚನೆ ಪ್ರಕರಣ ; ಮಂಜೇಶ್ವರ ಶಾಸಕ ಕಮರುದ್ದೀನ್ ಅಂದರ್ ; ನಿರಂತರ ಬಿಜೆಪಿ ಹೋರಾಟಕ್ಕೆ ಸಂದ ವಿಜಯ – ಕಹಳೆ ನ್ಯೂಸ್
ಕಾಸರಗೋಡು, ನ. 07 : ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್‌ರನ್ನು ಬಂಧಿಸಲಾಗಿದೆ.
ಇಂದು ಬೆಳಿಗ್ಗೆಯಿಂದ ವಿಶೇಷ ತನಿಖಾ ತಂಡ ಜಿಲ್ಲಾ ಪೊಲೀಸ್ ಕೇಂದ್ರದಲ್ಲಿ ವಿಚಾರಣೆ ನಡೆಸಿತ್ತು. ವಿಚಾರಣೆಯ ಬಳಿಕ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕಮರುದ್ದೀನ್‌ರನ್ನು ಬಂಧಿಸಿರುವುದಾಗಿ ಎ. ಎಸ್.ಪಿ ವಿವೇಕ್ ಕುಮಾರ್ ತಿಳಿಸಿದರು.
ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಕಂಪೆನಿ ಹೆಸರಿನಲ್ಲಿ ಸುಮಾರು 120 ಕೋಟಿ ರೂ. ಗಳಷ್ಟು ವಂಚನೆ ನಡೆದಿದ್ದು, ಸುಮಾರು 700 ಮಂದಿಯಿಂದ ಠೇವಣಿ ಪಡೆಯಲಾಗಿದೆ. ಈ ಪೈಕಿ 115 ಪ್ರಕರಣಗಳು ಈಗಾಗಲೇ ದಾಖಲಾಗಿದ್ದು, 15ಕೋಟಿ ರೂ. ಗಳ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.
ಚಂದೇರ, ಕಾಸರಗೋಡು, ಪಯ್ಯನ್ನೂರು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ನಾಲ್ಕು ಪ್ರಕರಣಗಳಲ್ಲಿ ಕಮರುದ್ದೀನ್‌ರನ್ನು ಬಂಧಿಸಲಾಗಿದೆ.
ಕಂಪೆನಿಯ ಮೆನೇಜಿಂಗ್ ಡೈರಕ್ಟರ್ ಟಿ .ಕೆ ಪೂಕೋಯ ತಂಘಳ್‌ನನ್ನು ಬಂಧಿಸುವ ಸಾಧ್ಯತೆ ಇದೆ.
ಒಂದು ವರ್ಷದ ಹಿಂದೆಯೇ ಠೇವಣಿ ವಂಚನೆ ಪ್ರಕರಣದ ಬಗ್ಗೆ ಚಂದೇರ ಪೊಲೀಸರಿಗೆ ದೂರು ಬಂದಿತ್ತು. ಆದರೆ ಈ ಬಗ್ಗೆ ತನಿಖೆ ನಡೆದಿರಲಿಲ್ಲ. ಆದರೆ ಕಳೆದ ಮೂರು ತಿಂಗಳ ಅವಧಿಯಲ್ಲಿ ಸಾಕಷ್ಟು ದೂರುಗಳು ಲಭಿಸಿದ್ದು, ಈ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಇದೀಗ ಕಮರುದ್ದೀನ್‌ರನ್ನು ಬಂಧಿಸಿದ್ದಾರೆ.
ವಂಚನೆ ಬೆಳಕಿಗೆ ಬಂದ ಸಂದರ್ಭದಲ್ಲಿ ಠೇವಣಿದಾರರಿಗೆ ಹಣವನ್ನು ಮರಳಿಸುವ ಬಗ್ಗೆ ಪಕ್ಷವು ಸಭೆಯನ್ನು ಕರೆದು ತೀರ್ಮಾನಕ್ಕೆ ಬಂದಿತ್ತು. ಇದರಂತೆ ಜುವೆಲ್ಲರಿಯ ಸೊತ್ತನ್ನು ಮಾರಾಟ ಮಾಡಿ ಹಣವನ್ನು ಠೇವಣಿದಾರರಿಗೆ ನೀಡುವಂತೆ ಪಕ್ಷದ ರಾಜ್ಯ ನಾಯಕತ್ವ ಶಾಸಕರಿಗೆ ನಿರ್ದೇಶನ ನೀಡಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿ ವರದಿ ನೀಡಲು ಪಕ್ಷದ ಜಿಲ್ಲಾ ಕೋಶಾಧಿಕಾರಿ ಮಾಹಿನ್ ಹಾಜಿಯವರಿಗೆ ಜವಾಬ್ದಾರಿ ನೀಡಿತ್ತು. ಆದರೆ ಸುಮಾರು 700 ರಷ್ಟು ಮಂದಿಗೆ 120 ಕೋಟಿ ರೂ. ನೀಡಬೇಕಾಗಿದ್ದು, ಜುವೆಲ್ಲರಿ ಆಸ್ತಿ ಕೇವಲ ಹತ್ತು ಕೋಟಿ ರೂ. ಮಾತ್ರ ಇರುವ ಬಗ್ಗೆ ಮಾಹಿನ್ ಹಾಜಿ ರಾಜ್ಯ ಸಮಿತಿಗೆ ವರದಿ ನೀಡಿದ್ದರು. ಇದರಿಂದ ಠೇವಣಿದಾರರಿಗೆ ಹಣ ಮರಳಿಸಲು ಅಸಾಧ್ಯವಾಗಿದ್ದು, ಪಕ್ಷವು ಕಮರುದ್ದೀನ್ ಕಾರ್ಯವೈಖರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತ್ತು.