ವಾಷಿಂಗ್ಟನ್: ಜಗತ್ತಿನಾದ್ಯಂತ ಮಾರಿಷಸ್ನಿಂದ ಹಿಡಿದಿ ಫಿಜಿಯವರೆಗೆ ಭಾರತೀಯ ಮೂಲದ ರಾಜಕಾರಣಿಗಳು ಚುನಾಯಿತರಾಗಿ ಆಡಳಿತ ಚುಕ್ಕಾನಿ ಹಿಡಿಯುತ್ತಿರುವುದು ಇದೇ ಮೊದಲಲ್ಲ. ಆದರೆ,ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ (56) ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ.
ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಭಾಜನರಾಗಿದ್ದಾರೆ. ಈ ಹುದ್ದೆಗೇರಿದ ಮೊದಲ ಬ್ಲ್ಯಾಕ್ ಅಮೆರಿಕನ್ ಮಹಿಳೆ ಎಂಬ ಕೀರ್ತಿಯೂ ಅವರದ್ದಾಗಿದೆ. ಅವರು ಕ್ಯಾಲಿಫೋರ್ನಿಯಾದ ಮೊದಲ ಮಹಿಳಾ ಅಟಾರ್ನಿ ಜನರಲ್ ಕೂಡ ಆಗಿದ್ದರು. ಈ ರೀತಿ ಅನೇಕ ಪ್ರಥಮಗಳ ದಾಖಲೆಗಳನ್ನು ಅವರು ಹೊಂದಿದ್ದಾರೆ. ಜನವರಿ 20ರಂದು ಅವರು ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಕಮಲಾ ಹ್ಯಾರಿಸ್ ಆಯ್ಕೆ ವಿಚಾರವಾಗಿ ಮಾತನಾಡಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್, ಕಮಲಾ ಎಂದೋ ಉಪಾಧ್ಯಕ್ಷರಾಗಬೇಕಾಗಿತ್ತು. ಈಗ ಆ ಕನಸು ನೆರವೇರುತ್ತಿದೆ. ಉಪಾಧ್ಯಕ್ಷ ಸ್ಥಾನದಲ್ಲಿ ದಕ್ಷಿಣ ಏಷ್ಯಾ ಮೂಲದ ಮೊದಲ ಮಹಿಳೆ, ಕಪ್ಪು ವರ್ಣದ ಮೊದಲ ಮಹಿಳೆ, ಮೊದಲ ಮಹಿಳೆ ಎಂಬಿತ್ಯಾದಿ ದಾಖಲೆಗಳೊಂದಿಗೆ ಅಧಿಕಾರ ಸ್ವೀಕರಿಸುತ್ತಿರುವ ಕಮಲಾ ಹ್ಯಾರಿಸ್ ಜತೆಗೆ ದೇಶದ ಕೆಲಸವನ್ನು ಮಾಡಲು ಅವಕಾಶ ಸಿಕ್ಕಿರುವುದು ನನಗೆ ಗೌರವದ ವಿಷಯವೇ ಆಗಿದೆ ಎಂದು ಹೇಳಿಕೊಂಡಿದ್ದಾರೆ.