ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಲಾಕ್ ಡೌನ್ ಜಾರಿಯಾದ ನಂತ್ರ, ಜನರಿಗೆ ದುಡಿಮೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುವವರೆಗೆ ವಿದ್ಯುತ್ ದರ ಏರಿಕೆ ಕೈಬಿಡಬೇಕು ಹಾಗೂ ತಕ್ಷಣದಿಂದಲೇ ಇದು ಜಾರಿಗೆ ಬರಬೇಕೆಂದು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಕಳೆದ 9 ತಿಂಗಳಿಂದ ಭಾದಿಸುತ್ತಿರುವ ಕೋವಿಡ್-19 ಪರಿಸ್ಥಿತಿಯಿಂದಾಗಿ ಜನಸಾಮಾನ್ಯರ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತಾಗಿದೆ. ಕೆಲಸವಿಲ್ಲದೆ ಸಂಬಳ, ಆದಾಯ ಇಲ್ಲ. ವ್ಯಾಪಾರಿಗಳಿಗೆ ವ್ಯಾಪಾರ ಇಲ್ಲ. ಮಾರುಕಟ್ಟೆ ಸಾಗಾಣೆ ಸೌಲಭ್ಯ ಕನಿಷ್ಠ ಬೆಲೆ ಇಲ್ಲದೆ ರೈತರ ಉತ್ಪನ್ನಗಳು ಹಾಗೂ ಬದುಕು ಹಾಳಾಗಿದೆ.
ಇಂತಹ ಸಂದರ್ಭದಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವುದು ಮೊದಲೇ ನರಳುತ್ತಿರುವವರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸುವವರೆಗೆ ವಿದ್ಯುತ್ ದರ ಏರಿಕೆ ಕೈಬಿಡಬೇಕು. ತಕ್ಷಣದಿಂದಲೇ ಇದು ಜಾರಿಗೆ ಬರಬೇಕೆಂದು ಈ ಮೂಲಕ ತಮ್ಮನ್ನು ಆಗ್ರಹಿಸುತ್ತಿದ್ದೇನೆ. ತಕ್ಷಣ ಈ ವಿಚಾರ ಕುರಿತು ಸಂಬಂಧ ಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.