Recent Posts

Sunday, January 19, 2025
ಸುದ್ದಿ

ಪುತ್ತೂರ ಒಡೆಯನಿಗೆ ಹತ್ತೂರು ಮೆಚ್ಚುವ ರಾಜಗೋಪುರ ; ಮಾರ್ಚ್ 25 ರಂದು ವೀರೇಂದ್ರ ಹೆಗ್ಗಡೆಯವರ ಅಮೃತಹಸ್ತದಿಂದ ಲೋರ್ಕಾಪಣೆ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಭವ್ಯ ರಾಜಗೋಪುರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮಾ. 25ರಂದು ಉದ್ಘಾಟನೆಗೊಳ್ಳಲಿದೆ ಎಂದು ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ  ಅವರು ಹೇಳಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ. ದೇವಸ್ಥಾನದ ಮುಂಭಾಗ ಮೊದಲ ಬಾರಿಗೆ ರಾಜಗೋಪುರ ನಿರ್ಮಿಸಲಾಗಿದೆ. ಹತ್ತು ತಿಂಗಳಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಗೋಪುರಕ್ಕೆ ಭಕ್ತರು ದೇಣಿಗೆ ನೀಡಿದ್ದಾರೆ. ತಮಿಳುನಾಡಿನ ಖ್ಯಾತ ಸ್ತಪತಿ ಶೇಖರ್‌ ಅವರ ವಾಸ್ತು ವಿನ್ಯಾಸ ಮಾರ್ಗದರ್ಶನದಂತೆ ನಿರ್ಮಾಣ ಕಾರ್ಯ ನಡೆದಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೇವಸ್ಥಾನದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ನಾನಾ ವೈದಿಕ ಕಾರ್ಯಕ್ರಮ ನಡೆಯಲಿವೆ. ಮಾ. 24ರಂದು ಸಂಜೆ 7 ಗಂಟೆಯಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹವನ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹ, ಸುದರ್ಶನ ಹವನ, ಮಂಟಪ ನಮಸ್ಕಾರ, ಸಹಸ್ರ ಕಲಶಪೂಜೆ, ಪರಿಕಲಶ ಪೂಜೆ, ಕುಂಭೇಶ ಕರ್ಕರೀ ಪೂಜೆ, ಅಧಿವಾಸ ಹವನ, ಅಧಿವಾಸ ಬಲಿ, ಕಲಶಾ ವಾಸ ನಡೆಯಲಿದೆ. ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾ. 25ರಂದು ಬೆಳಗ್ಗೆ 7ರಿಂದ ಗಣಪತಿ ಹವನ, ಸಹಸ್ರ ಕಲಶಾಭಿಷೇಕ ನಡೆಯಲಿದೆ.  ಮಧ್ಯಾಹ್ನ 11.28ರ ಮಿಥುನ ಲಗ್ನದಲ್ಲಿ ನೂತನ ರಾಜಗೋಪುರದ ಶಿಖರ ಪ್ರತಿಷ್ಠೆ, ಕಲಶಾಭಿಷೇಕ, ರಾಜಗೋಪುರ ಸಮರ್ಪಣೆ, ಉದ್ಘಾಟನೆ, ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರಗಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ರಾಜಗೋಪುರ ಲೋಕಾರ್ಪಣೆ ಮಾಡುವರು. ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕಿ ಶಕುಂತಳಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ವಿನಯ ಕುಮಾರ್‌ ಸೊರಕೆ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡ್‌, ಸಹಾಯಕ ಆಯುಕ್ತ ಕೃಷ್ಣಮೂರ್ತಿ, ಪುಡಾ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ ಮುಖ್ಯ ಅತಿಥಿಯಾಗಿರುವರು ಎಂದರು.

ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ದೇವಸ್ಥಾನದಲ್ಲಿ ಭಜನ ಸಂಕೀರ್ತನೆ ನಡೆಯಲಿದೆ. ಸಂಜೆ ಭಜನೆ ಮತ್ತು ನೃತ್ಯ ಸಂಭ್ರಮವಿದೆ. ರಾತ್ರಿ ಭಕ್ತಿಗೀತೆ ಕಾರ್ಯಕ್ರಮ ಜಗದೀಶ್‌ ಆಚಾರ್ಯ ಮತ್ತು ಬಳಗದಿಂದ ನಡೆಯಲಿದೆ. ಮಾ. 26ರಂದು ಬೆಳಗ್ಗೆ 6ರಿಂದ ರುದ್ರ ಪಾರಾಯಣ, 9ರಿಂದ ಶತರುದ್ರಾಭಿಷೇಕ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ದೇವರ ಬಲಿ ಉತ್ಸವ, ಬಂಡಿ ಉತ್ಸವ ನಡೆಯಲಿದೆ. ಆ ದಿನವೂ ಬೆಳಗ್ಗೆ ಮತ್ತು ಸಂಜೆ ಭಜನ ಮಂಗಲೋತ್ಸವ ನಡೆಯುತ್ತದೆ. ಸಹಸ್ರ ಕಲಶಾಭಿಷೇಕದಲ್ಲಿ ಭಕ್ತರ ಪಾಲುದಾರಿಕೆ ಇರಬೇಕಾದ ಕಾರಣ ಕಲಶವೊಂದಕ್ಕೆ 1000 ರೂ. ನಿಗದಿಪಡಿಸಲಾಗಿದೆ ಎಂದರು. ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಯು.ಪಿ. ರಾಮಕೃಷ್ಣ, ಕರುಣಾಕರ ರೈ, ಜಾನು ನಾಯ್ಕ, ರೋಹಿಣಿ ಆಚಾರ್ಯ ಉಪಸ್ಥಿತರಿದ್ದರು.

ಹೀಗಿದೆ ರಾಜಗೋಪುರ : 

ರಾಜಗೋಪುರ 47.5 ಅಡಿ ಎತ್ತರವಿದೆ. 19 ಅಡಿ ಸುತ್ತಳತೆ ಹೊಂದಿದೆ. ದೇವಸ್ಥಾನದ ಕೊಡಿಮರಕ್ಕಿಂತ (55) ಏಳೂವರೆ ಅಡಿ ಸಣ್ಣದಾಗಿ ರಾಜಗೋಪುರ ನಿರ್ಮಿಸಲಾಗಿದೆ. ಗೋಪುರದ ಶಿಖರದಲ್ಲಿ ಪಂಚ ಕಲಶಗಳನ್ನು ಸ್ಥಾಪಿಸಲಾಗುತ್ತದೆ. ಗೋಪುರದ ಸುತ್ತ 120 ದೇವತಾ ಮೂರ್ತಿ, ಎರಡೂ ಪಾರ್ಶ್ವಗಳಲ್ಲಿ ತಲಾ 57.5 ಅಡಿ ಉದ್ದದ ಸೋಬಾನೆ ಮಂಟಪ, ಇವುಗಳಲ್ಲಿ 32 ಆಕರ್ಷಕ ಕಂಬ, ಸೋಬಾನೆ ಮಂಪಟದ ಪಕ್ಕದಲ್ಲಿ ಎರಡು ಕಮಾನು ದ್ವಾರಗಳಿದ್ದು, 36 ಅಡಿ ಎತ್ತರ ಮತ್ತು 18 ಅಡಿ ಅಗಲವಿದೆ. ಇವುಗಳ ಪಕ್ಕದಲ್ಲಿ ಎರಡೂ ಕಡೆ ಕಿರು ಮಂಟಪವಿದೆ. ಇವುಗಳು 10 ಅಡಿ ಉದ್ದ ಮತ್ತು ಏಳು ಅಡಿ ಅಗಲವಿವೆ ಎಂದು ಸುಧಾಕರ ಶೆಟ್ಟಿ ಮಾಹಿತಿ ನೀಡಿದರು.