Sunday, January 19, 2025
ಜಿಲ್ಲೆ

ಪುತ್ತೂರು: 1.5 ಎಕರೆ ಜಮೀನಿಗೆ ₹3 ಕೋಟಿ! – ಕಹಳೆ ನ್ಯೂಸ್

ನಗರಕ್ಕೆ ನೀರು ಸರಬರಾಜು ಮಾಡಲು ಹೈಲಿಫ್ಟ್‌ ಟ್ಯಾಂಕ್‌ ನಿರ್ಮಿಸಲು ಗುರುತಿಸಿರುವ ಸ್ಥಳಕ್ಕೆ ₹ 3 ಕೋಟಿ ಪರಿಹಾರ ಮೊತ್ತ ನಿಗದಿ ಪಡಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಇದಕ್ಕೆ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ನಗರದ ನೂತನ ನೀರು ಸರಬರಾಜು ವ್ಯವಸ್ಥೆಯ ಜಲಸಿರಿ ಯೋಜನೆಯಡಿ ಈಗಾಗಲೇ ಕಾಮಗಾರಿಗಳು ನಡೆಯುತ್ತಿವೆ. ನಗರಸಭಾ ವ್ಯಾಪ್ತಿಯ ಕರ್ಮಲ ಗುಡ್ಡದಲ್ಲಿ ಹೈ ಲಿಫ್ಟ್ ಟ್ಯಾಂಕ್ ನಿರ್ಮಿಸಲು 1.50 ಎಕರೆ ಖಾಸಗಿ ನಿವೇಶನ ಗುರುತಿಸಲಾಗಿದೆ. ಯಾವುದೇ ರೀತಿಯ ಸಂಪರ್ಕ ರಸ್ತೆ, ಕಾಲು ದಾರಿ ವ್ಯವಸ್ಥೆಯೂ ಇಲ್ಲದ ಈ ನಿವೇಶನಕ್ಕೆ ₹3ಕೋಟಿ ಧಾರಣೆ ಪರಿಹಾರ ನಿಗದಿಪಡಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ನಗರಸಭೆಯ ಬಿಜೆಪಿ ಸದಸ್ಯ ಭಾಮಿ ಅಶೋಕ್ ಶೆಣೈ ಅವರು ಈ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಈ ಹಿಂದೆ ಇದೇ ನಿವೇಶನವನ್ನು ಟ್ಯಾಂಕ್ ನಿರ್ಮಾಣ ಮಾಡಲು ಆಯ್ಕೆ ಮಾಡಿದಾಗ ಅಂದಿನ ಪುತ್ತೂರು ಉಪವಿಭಾಗಾಧಿಕಾರಿ, ಸಂಪರ್ಕರಹಿತ ಸ್ಥಳವೆಂದು ಈ ಭೂ ಸ್ವಾಧೀನ ಪ್ರಸ್ತಾವವನ್ನು ರದ್ದುಪಡಿಸಿದ್ದರು. ಇದೀಗ ಮತ್ತೆ ಪ್ರಸ್ತಾವ ಸಿದ್ಧಗೊಂಡಿದೆ.ಉದ್ದೇಶಿತ ಟ್ಯಾಂಕ್ ನಿರ್ಮಿಸುವ ಪ್ರದೇಶಕ್ಕೆ ತಾಗಿಕೊಂಡಿರುವ ಸಿಟಿ ಗುಡ್ಡೆಯಲ್ಲಿ ಭೂ ಕುಸಿತ ಸಾಧ್ಯತೆಗಳು ಹೆಚ್ಚಿವೆ. ‘₹3ಕೋಟಿ ಪರಿಹಾರ ನಿಗದಿಯಲ್ಲಿ ಜಲಸಿರಿ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಅವರ ನೇರ ಕೈವಾಡವಿದೆ’ ಎಂದು ಭಾಮಿ ಅಶೋಕ್ ಶೆಣೈ ಮುಖ್ಯಮಂತ್ರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಜಮೀನಿನ ಭೂ ಪರಿವರ್ತನಾ ಆದೇಶದ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಆಗಿದೆ. ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಆಡಳಿತವಿದ್ದರೂ, ಕೌನ್ಸಿಲ್ ಅಸ್ತಿತ್ವಕ್ಕೆ ಬರುವ ಮೊದಲೇ ತರಾತುರಿಯಲ್ಲಿ ಜಮೀನಿನ ನೋಂದಣಿ ಪ್ರಕ್ರಿಯೆ ನಡೆಸಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ ಐಜಿಪಿ, ಸ್ಥಳೀಯ ಶಾಸಕ ಸಂಜೀವ ಮಠಂದೂರು, ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಗರಾಭಿವೃದ್ಧಿ ಸಚಿವ ಬಿ. ಬಸವರಾಜು ಅವರಿಗೂ ದೂರಿನ ಪ್ರತಿಯನ್ನು ರವಾನಿಸಲಾಗಿದೆ.