
ಅಯೋಧ್ಯೆ-ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಆಚರಿಸಲಾದ ದೀಪೋತ್ಸವ ಹೊಸ ವಿಶ್ವ ದಾಖಲೆಗೆ ಪಾತ್ರವಾಗಿದೆ. ಶತಶತಮಾನಗಳಷ್ಟು ಹಳೆಯದಾದ ರಾಮ್ಮ ಜನ್ಮಭೂಮಿ ವಿವಾದ ಇತ್ಯರ್ಥವಾದ ನಂತರ ಅಯೋಧ್ಯೆಯಲ್ಲಿ ನಡದ ಮೊದಲ ಲಕ್ಷಗಟ್ಟಲೆ ದೀಪೋತ್ಸವಕ್ಕೆ ವಿಶೇಷ ಪ್ರಾಮುಖ್ಯತೆ ಲಭಿಸಿದೆ. ಅಲ್ಲದೆ 6 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳು ಸರಯು ನದಿ ದಂಡೆಯಲ್ಲಿ ಉಜ್ವಲವಾಗಿ ಬೆಳಗಿ ನೂತನ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದೆ.
ನದಿ ದಂಡೆಯಲ್ಲಿ ಒಟ್ಟು, 6,06,569 ದೀಪಗಳು ಸುಮಾರು 45 ನಿಮಿಷಗಳ ಕಾಲ ಉಜ್ವಲವಾಗಿ ಬೆಳಗಿದವು. ಈ ಮೂಲಕ ಸರಯು ನದಿಗೆ ವಿಶೇಷ ಮೆರಗು ನೀಡಿದವು. ಈ ದೇವೀಪ್ಯಮಾನ ಬೆಳಕಿನ ವೈಭವವನ್ನು ಪ್ರವಾಸಿಗರು ಮತ್ತು ಭಕ್ತರು ಕಣ್ತುಂಬಿಕೊಂಡರು. ರಾಮ್ ಕಿ ಪಾಡಿಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪೂಜೆ ನೆರವೇರಿಸಿ ದೀಪ ಬೆಳಗಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ವರ್ಷ 5 ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆಗಳನ್ನು ಬೆಳಗಿಸಲಾಗಿತ್ತು. ಈ ವರ್ಷ 6 ಲಕ್ಷಕ್ಕೂ ಅಧಿಕ ದೀಪಗಳು ಬೆಳಗಿದವು. ಮುಂದಿನ ವರ್ಷವೂ ಕೂಡ 7.50 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಿ ಮತ್ತೊಂದು ವಿಶ್ವ ದಾಖಲೆ ನಿರ್ಮಿಸುವುದಾಗಿ ಯೋಗಿ ಅದಿತ್ಯನಾಥ ತಿಳಿಸಿದರು.