ಬೆಂಗಳೂರು: ಕೋವಿಡ್-19 ಸೋಂಕು ಕಾರಣಕ್ಕಾಗಿ ಮಾರ್ಚ್‌ನಿಂದ ಮುಚ್ಚಿರುವ ಪದವಿ, ವಿಶ್ವವಿದ್ಯಾನಿಲಯಗಳ ತರಗತಿ ಕೊಠಡಿಗಳ ಬಾಗಿಲುಗಳು ಇಂದಿನಿಂದ ಸಕಲ ಸುರಕ್ಷಾ ಕ್ರಮದೊಂದಿಗೆ ಮತ್ತೆ ತೆರೆಯಲಿವೆ. ಜತೆಗೆ 2020-21ನೇ ಸಾಲಿನ ಶೈಕ್ಷಣಿಕ ವರ್ಷವೂ ಅಧಿಕೃತವಾಗಿ ಇಂದಿನಿಂದಲೇ ಆರಂಭವಾಗಲಿದೆ.
ರಾಜ್ಯ ಸರಕಾರ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ವಿ.ವಿ.ಗಳು ಹಾಗೂ ಕಾಲೇಜು ಆಡಳಿತ ಮಂಡಳಿಗಳು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿವೆ. ತರಗತಿ ಕೊಠಡಿಯ ಬೋಧನೆಯ ಜತೆಗೆ ಆನ್‌ಲೈನ್ ಹಾಗೂ ಆಫ್ ಲೈನ್ ಬೋಧನೆಗಳು ನಿರಂತರವಾಗಿರಲಿವೆ. ಸುರಕ್ಷತಾ ಕ್ರಮವಾಗಿ ಕಾಲೇಜು ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದೆ.
ಕಡ್ಡಾಯವಲ್ಲ: ವಿದ್ಯಾರ್ಥಿಗಳು ಕಾಲೇಜಿಗೆ ಬರಲೇಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಹಾಗೆಯೇ ವಿದ್ಯಾರ್ಥಿಗಳು ಕಾಲೇಜಿಗೆ ಕಡ್ಡಾಯವಾಗಿ ಬರಬೇಕು ಎಂದು ಆಡಳಿತ ಮಂಡಳಿಗಳು ಒತ್ತಡ ಹೇರುವಂತಿಲ್ಲ. ಬಹುತೇಕ ವಿಶ್ವವಿದ್ಯಾನಿಲಯಗಳು ನ. 17ರಿಂದ ಪದವಿಯ 5ನೇ ಸೆಮಿಸ್ಟರ್ ಮತ್ತು ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ಭೌತಿಕ ತರಗತಿ ನಡೆಸಲಿವೆ. ಉಳಿದಂತೆ ಎಲ್ಲ ವಿದ್ಯಾರ್ಥಿಗಳಿಗೂ ಆನ್‌ಲೈನ್ ಹಾಗೂ ಆಫ್ ಲೈನ್ ವ್ಯವಸ್ಥೆಯಲ್ಲೇ ಬೋಧನೆ ಮುಂದುವರಿಯಲಿವೆ. ಪದವಿಯ 5ನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಭೌತಿಕ ತರಗತಿಯಲ್ಲಿ ಭಾಗವಹಿಸಲು ಇಚ್ಛಿಸದೇ ಇದ್ದಲ್ಲಿ ಆನ್ ಲೈನ್ ಬೋಧನಾ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಕೋವಿಡ್ ಟೆಸ್ಟ್: ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ನೆಗಟಿವ್ ವರದಿಯೊಂದಿಗೆ ಕಾಲೇಜಿಗೆ ಬರಬೇಕಿದೆ. ಅದಲ್ಲದೆ ಪೋಷಕರ ಒಪ್ಪಿಗೆ ಪತ್ರವನ್ನು ತರಬೇಕಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ತರಗತಿ ನಡೆಸಲು ಸರ್ಕಾರ ಸೂಚಿಸಿದೆ.