ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚ ಭರಿಸಲಿರುವ ಕೇಂದ್ರ ಸರ್ಕಾರ – ಕಹಳೆ ನ್ಯೂಸ್
ನವದೆಹಲಿ : ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ರಕ್ಷಣಾ ಇಲಾಖೆ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಈ ವರೆಗೂ ಇದ್ದ 10 ಸಾವಿರ ರೂಪಾಯಿ ಮಿತಿಯನ್ನು ತೆಗೆದು ಹಾಕಿ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ತಿಳಿದುಬಂದಿದೆ. ಅಧಿಕಾರಿ ಶ್ರೇಣಿಯಿಂದ ಕೆಳಗಿರುವ ಹುತಾತ್ಮ, ವಿಕಲಚೇತನ, ಹತ್ಯೆಗೀಡಾದ ಯೋಧರ ಮಕ್ಕಳಿಗೆ ಈ ಸೌಲಭ್ಯ ಅನ್ವಯವಾಗಲಿದ್ದು, 3,400 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಹುತಾತ್ಮ ಯೋಧರ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ಒಟ್ಟಾರೆ ವರ್ಷಕ್ಕೆ 5 ಕೋಟಿ ರೂಪಾಯಿಯಷ್ಟಾಗಲಿದ್ದು, ಸರ್ಕಾರಿ, ಸರ್ಕಾರಿ ಅನುದಾನಿತ ಶಾಲೆ, ಶಿಕ್ಷಣ ಸಂಸ್ಥೆ, ಮಿಲಿಟರಿ, ಸೈನಿಕ್ ಶಾಲೆ ಹಾಗೂ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಈ ಸೌಲಭ್ಯ ಪಡೆಯಬಹುದಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿಕೆ ಮೂಲಕ ತಿಳಿದುಬಂದಿದೆ.
ಹುತಾತ್ಮ ಯೋಧರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಪೂರ್ಣ ವೆಚ್ಚ ಭರಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ಈಗ ನೀಡಲಾಗುತ್ತಿದ್ದ 10,000 ರೂ ಮಿತಿಯನ್ನು ತೆಗೆದುಹಾಕಬೇಕು ಎಂದು ರಕ್ಷಣಾ ಇಲಾಖೆ ಹಣಕಾಸು ಇಲಾಖೆಗೆ ಪತ್ರ ಬರೆದು ಮನವಿ ಮಾಡಿತ್ತು. ಈ ಬೆನ್ನಲ್ಲೇ ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
https://twitter.com/DefenceMinIndia/status/976708741058904064