ಕಾಸರಗೋಡು : ಕೊಚ್ಚಿ-ಮಂಗಳೂರು ಅನಿಲ ಕೊಳವೆಮಾರ್ಗ ಯೋಜನೆ ಕೊನೆಗೂ ಪೂರ್ಣಗೊಂಡಿದ್ದು, ಅನಿಲ ಸರಬರಾಜಿಗೆ ಸಂಪೂರ್ಣ ತಯಾರಾಗಿದೆ. ಈ ಯೋಜನೆಯಲ್ಲಿ ಅತ್ಯಂತ ಕ್ಲಿಷ್ಟಕರವೆನ್ನಲಾದ 540 ಮೀಟರ್ ಉದ್ದದ ಕೊಳವೆ ಕಾಮಗಾರಿ ಮುಗಿಯುವುದರೊಂದಿಗೆ ಯೋಜನೆ ಪೂರ್ಣಗೊಂಡಂತಾಗಿದೆ. ಕಾಸರಗೋಡಿನ ಚಂದ್ರಗಿರಿ ನದಿಯನ್ನು ಹಾದು ಹೋಗುವ ಈ 540 ಮೀಟರ್ ಉದ್ದದ ಕಾಮಗಾರಿ ಬಹಳ ಸವಾಲಿನದ್ದಾಗಿತ್ತು. ಅದೀಗ ಯಶಸ್ವಿಯಾಗಿದೆ. ಇನ್ನೆರಡು ದಿನಗಳ ಕಾಲ ಇಲ್ಲಿ ಅನಿಲ ಸರಬರಾಜು ಮಾಡಿ ಪರೀಕ್ಷಿಸಲಾಗುವುದು. ಅದು ಯಶಸ್ವಿಯಾದಲ್ಲಿ ಇದೇ ವಾರ ಕೊಚ್ಚಿಯಿಂದ ಮಂಗಳೂರಿಗೆ ಅನಿಲ ಸರಬರಾಜು ಮಾಡಲಾಗುವುದು ಎಂದು ಗೇಲ್ ಇಂಡಿಯಾ ಸಂಸ್ಥೆಯ ಕಾರ್ಯವಾಹಕ ನಿರ್ದೇಶಕ ಪಿ ಮುರುಗೇಶನ್ ತಿಳಿಸಿದ್ದಾರೆ.
ಗೇಲ್ ಇಂಡಿಯಾ ಸಂಸ್ಥೆ ಕೈಗೆತ್ತಿಕೊಂಡ ಈ ನ್ಯಾಚುರಲ್ ಗ್ಯಾಸ್ ಪೈಪ್ಲೈನ್ ಯೋಜನೆ ಕೊಚ್ಚಿಯಿಂದ ಮಂಗಳೂರಿನವರೆಗೆ ಒಟ್ಟಾರೆ 444 ಕಿಮೀ ದೂರ ಇದೆ. 2009ರಲ್ಲೇ ಯೋಜನೆ ಪ್ರಾರಂಭಗೊಂಡರೂ ಭೂಸ್ವಾಧೀನ, ರಾಜಕಾರಣ ಇತ್ಯಾದಿ ಅಡೆತಡೆಗಳಿಂದಾಗಿ ವಿಳಂಬಗೊಳ್ಳುತ್ತಾ ಬಂದಿತ್ತು. ಇದರಿಂದಾಗಿ, ಆರಂಭದಲ್ಲಿ 2,915 ಕೋಟಿ ವೆಚ್ಚದ ಅಂದಾಜು ಇದ್ದ ಈ ಯೋಜನೆಗೆ ಈಗ ಬರೋಬ್ಬರಿ 5,750 ಕೋಟಿ ರೂ ಖರ್ಚಾಗಿದೆ. ಚೀನಾ ಅಧ್ಯಕ್ಷ ಜಿನ್ಪಿಂಗ್ ಜೊತೆ ಮತ್ತೆ ವೇದಿಕೆ ಹಂಚಿಕೊಳ್ಳಲಿರುವ ಪ್ರಧಾನಿ ಮೋದಿ
ಚಂದ್ರಗಿರಿ ನದಿ ಮೂಲಕ ಹಾದುಹೋಗುವ 540 ಮೀಟರ್ ಉದ್ದದ ಹಾದಿಯಲ್ಲಿ ಪೈಪ್ಲೈನ್ ಹಾಕುವುದು ಅತ್ಯಂತ ಸವಾಲಿನದ್ದಾಗಿತ್ತು. ಎನ್.ಆರ್ ಪಟೇಲ್ ಅಂಡ್ ಕಂಪನಿಗೆ ಇದರ ಗುತ್ತಿಗೆ ನೀಡಲಾಗಿತ್ತು. ದುರ್ಗಮವಾದ ಕಣಿವೆಯ ಮೇಲಿಂದ ಅರೇಬಿಯನ್ ಸಮುದ್ರಕ್ಕೆ ಈ ನದಿ ಸಾಗುತ್ತದೆ. ಇಲ್ಲಿ ನದಿದಂಡೆಯ ಕೆಳಗಿನಿಂದ ಅಡ್ಡವಾಗಿ ಮಾರ್ಗ ಕೊರೆಯಬೇಕಾಗಿತ್ತು. ಕೆಲವೊಂದು ಕಡೆ ದಂಡೆಯ 8 ಮೀಟರ್ ಕೆಳಗಿನಿಂದ ರಂದ್ರ ಮಾಡಬೇಕಾಯಿತು. 24 ಇಂಚು ಅಗಲದ ಈ ಪೈಪ್ಲೈನ್ ಅನ್ನು ಚಂದ್ರಗಿರಿ ನದಿಯಲ್ಲಿ 6 ಇಂಚಿಗೆ ಇಳಿಸಬೇಕಾಯಿತು ಎಂದು ಮುರುಗೇಶನ್ ಹೇಳುತ್ತಾರೆ.
ಈಗಾಗಲೇ ಕೇರಳದ ಕೆಲ ಪ್ರದೇಶಗಳವರೆಗೆ ಈ ಪೈಪ್ಲೈನ್ ಚಾಲನೆಯಲ್ಲಿದೆ. ಈಗ ಮಂಗಳೂರಿನವರೆಗೆ ಈ ಪೈಪ್ಲೈನ್ ಕಾರ್ಯನಿರ್ವಹಿಸಲು ಅಣಿಗೊಂಡಿದೆ. ನ್ಯಾಚುರಲ್ ಗ್ಯಾಸ್ ಪೈಪ್ಲೈನ್ ಮೂಲಕ ಮನೆಮನೆಗಳಿಗೆ ಕಡಿಮೆ ದರದಲ್ಲಿ ಅಡುಗೆ ಅನಿಲ ಸರಬರಾಜು ಮಾಡಲು ಸಾಧ್ಯವಿದೆ. ಸರ್ಕಾರಕ್ಕೆ ಸಾಕಷ್ಟು ವೆಚ್ಚದ ಉಳಿತಾಯವೂ ಆಗಲಿದೆ. ಹಾಗೆಯೇ, ತೆರಿಗೆ ಮೂಲಕ ಹಣವೂ ಹರಿದುಬರಲಿದೆ. ಕೊಚ್ಚಿ ಸೇರಿದಂತೆ ಕೇರಳದ 9 ಜಿಲ್ಲೆಗಳಿಗೆ ಈ ಗ್ಯಾಸ್ ಪೈಪ್ಲೈನ್ ಯೋಜನೆಯಿಂದ ಲಾಭವಾಗಲಿದೆ.