Friday, September 20, 2024
ಸುದ್ದಿ

ಪಾಕಿಸ್ತಾನ ಸೇರಿ ಇತರ ಹನ್ನೊಂದು ದೇಶಗಳಿಗೆ ಯುಎಇ ವೀಸಾ ಅಮಾನತು – ಕಹಳೆ ನ್ಯೂಸ್

ಪಾಕಿಸ್ತಾನ ಸೇರಿದಂತೆ ಇತರ ಹನ್ನೊಂದು ದೇಶಗಳ ಸಂದರ್ಶಕರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಬುಧವಾರದಿಂದ ತಾತ್ಕಾಲಿಕವಾಗಿ ವೀಸಾ ಅಮಾನತು ಮಾಡಿರುವುದಾಗಿ ವಿದೇಶಾಂಗ ಕಚೇರಿ ತಿಳಿಸಿದೆ. ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ವಿದೇಶಾಂಗ ಕಚೇರಿ ವಕ್ತಾರ ಝಾಹೀದ್ ಹಫೀಜ್ ಚೌಧುರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ವಿತರಣೆ ಆಗಿರುವ ವೀಸಾಗಳಿಗೆ ಈ ಅಮಾನತು ಅನ್ವಯ ಆಗುವುದಿಲ್ಲ ಎಂದು ತಿಳಿಸಲಾಗಿದೆ. ಈಗಿನ ನಡೆಯಿಂದ ಎಷ್ಟು ಬಗೆಯ ವೀಸಾಗಳ ಮೇಲೆ ಪರಿಣಾಮ ಆಗಲಿದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಪ್ರವಾಸಿ, ವಾಣಿಜ್ಯ, ವಿದ್ಯಾರ್ಥಿ ಸೇರಿ ವಿವಿಧ ಬಗೆಯ ವೀಸಾಗಳನ್ನು ಯುಎಇಯಿಂದ ವಿತರಣೆ ಮಾಡಲಾಗುತ್ತದೆ.

ಜಾಹೀರಾತು

ಪಾಕಿಸ್ತಾನವನ್ನು ಹೊರತುಪಡಿಸಿದರೆ ಟರ್ಕಿ, ಇರಾನ್, ಯೆಮೆನ್, ಸಿರಿಯಾ, ಇರಾಕ್, ಸೋಮಾಲಿಯಾ, ಲಿಬಿಯಾ, ಕೀನ್ಯಾ, ಅಫ್ಗಾನಿಸ್ತಾನಕ್ಕೂ ಈಗಿನ ವೀಸಾ ಅಮಾನತಿನ ಪರಿಣಾಮ ಆಗುತ್ತದೆ. ಈ ಹಿಂದೆ ಜೂನ್ ನಲ್ಲಿ ಕೊರೊನಾ ಪ್ರಕರಣಗಳು ವಿಪರೀತ ಹೆಚ್ಚಾಗಿದ್ದಾಗ ಜುಲೈ ತನಕ ತಾತ್ಕಾಲಿಕವಾಗಿ ಪಾಕಿಸ್ತಾನ ಪ್ರಯಾಣಿಕರಿಗೆ ವೀಸಾ ಸೇವೆ ಅಮಾನತು ಮಾಡಲಾಗಿತ್ತು.

ಹಾಂಕಾಂಗ್ ನಲ್ಲಿ ಎಮಿರೇಟ್ಸ್ ವಿಮಾನ ಏರಿದ ಮೂವತ್ತು ಪಾಕಿಸ್ತಾನಿಯರಿಗೆ ಕೊರೊನಾ ಪಾಸಿಟಿವ್ ಎಂದು ಬಂದ ಮೇಲೆ ಈ ನಿರ್ಧಾರ ಬಂದಿದೆ. ಅಂದ ಹಾಗೆ ಕಳೆದ ಆಗಸ್ಟ್ ನಲ್ಲಿ ಕುವೈತ್ ವಿಮಾನ ಯಾನವು ಪಾಕಿಸ್ತಾನ ಮತ್ತು ಮೂವತ್ತು ದೇಶಕ್ಕೆ ‘ಹೆಚ್ಚು ಅಪಾಯಕಾರಿ’ ಎಂದು ಪರಿಗಣಿಸಿ, ವಾಣಿಜ್ಯ ವಿಮಾನಗಳನ್ನು ನಿಷೇಧಿಸಿತ್ತು.ಅಕ್ಟೋಬರ್ ಕೊನೆಯ ಭಾಗದಿಂದ ಕೊರೊನಾ ಸೋಂಕಿತ ಪ್ರಕರಣಗಳು ಪಾಕಿಸ್ತಾನದಲ್ಲಿ ಜಾಸ್ತಿ ಆಗುತ್ತಿದೆ. ಎರಡನೇ ಬಾರಿಗೆ ಕೊರೊನಾ ಅಲೆ ಪಾಕ್ ನಲ್ಲಿ ಎದ್ದಿದೆ ಎಂದು ಅಧಿಕಾರಿಗಳು ಘೋಷಣೆ ಮಾಡಿದ್ದಾರೆ.

ಕರಾಚಿ, ಲಾಹೋರ್, ಇಸ್ಲಾಮಾಬಾದ್, ಫೈಸಲಾಬಾದ್ ಹಾಗೂ ಹೈದರಾಬಾದ್ ನಂಥ ಪ್ರಮುಖ ನಗರಗಳಲ್ಲಿ ಸೋಂಕು ಪ್ರಕರಣ ವಿಪರೀತ ಹೆಚ್ಚಾಗಿದೆ. ಕೊರೊನಾ ತಡೆಯಬೇಕಾದ ಇಂಥ ಸನ್ನಿವೇಶದಲ್ಲಿ ದೇಶದ ಜನರು ಒಗ್ಗಟ್ಟಾಗಿ ಇರಬೇಕು ಎಂದು ಈಚೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು, ಈ ತನಕ ಪಾಕಿಸ್ತಾನದಲ್ಲಿ 3,63,380 ಸೋಂಕಿನ ಪ್ರಕರಣಗಳಿದ್ದು, 7,230 ಮಂದಿ ಕೊರೊನಾಗೆ ಸಾವನ್ನಪ್ಪಿದ್ದಾರೆ.