Friday, September 20, 2024
ಸುದ್ದಿ

ಹತ್ತೂರೊಡೆಯನ ಸನ್ನಿಧಿಯಲ್ಲಿ ವಿಜ್ರಂಭಣೆಯ ‘ ಶ್ರೀ ರಾಮೋತ್ಸವ ‘ ; ರಾವಣ ದಹನ, ಧರ್ಮ ರಕ್ಷಣೆಯ ಸಂಕಲ್ಪ – ಕಹಳೆ ನ್ಯೂಸ್

ಪುತ್ತೂರು : ಧರ್ಮರಕ್ಷಣೆಗಾಗಿ, ಹಿಂದುತ್ವದ ಉಳಿವಿಗಾಗಿ, ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಕ್ತಿ ತುಂಬಲು ಶ್ರೀ ಮಹಾಲಿಂಗೇಶ್ವರ ದೇವಾಲಯದ ಎದುರಿನ ಗದ್ದೆಯಲ್ಲಿ ವೇ|ಮೂ| ಶ್ರೀಕೃಷ್ಣ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀರಾಮಚಂದ್ರ ಅವತರಿಸಿದ ಪುಣ್ಯ ದಿನದ ಪ್ರಯುಕ್ತ ಮಾ. 28 ರಂದು 2 ನೇ ವರ್ಷದ ಶ್ರೀ ರಾಮೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ರಾಮೋತ್ಸವ ಸಮಿತಿ ಅಧ್ಯಕ್ಷ ದಿನೇಶ್ ಜೈನ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಹಿಂದೂ ಪರಿಷದ್, ಬಜರಂಗದಳ, ಮಾತೃಮಂಡಳಿ, ದುರ್ಗಾವಾಹಿನಿ ಪುತ್ತೂರು ಜಿಲ್ಲೆ, ಶ್ರೀ ರಾಮೋತ್ಸವ ಸಮಿತಿ ಪುತ್ತೂರು ಹಾಗೂ ಗರುಡತೇಜ ರಿಕ್ಷಾ ಚಾಲಕ ಮಾಲಕರ ಘಟಕ ಪುತ್ತೂರು ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದುತ್ವದ ಜಾಗೃತಿಗಾಗಿ ರಾಮರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಲು ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್‍ನ ಧರ್ಮ ಸಂಸತ್‍ನಲ್ಲಿ ಒಕ್ಕೊರಳಿನಿಂದ ನಿರ್ಣಯಿಸಿದಂತೆ ರಾಜ್ಯದ ಪ್ರತಿ ತಾಲೂಕಿನಲ್ಲಿ ರಾಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ನಿರ್ಮಾಣವಾಗಬೇಕು, ಅದಕ್ಕಾಗಿ ತಾಲೂಕಿನ ಹಿಂದು ಮಹನೀಯರು ರಾಮ ಜಪವನ್ನು ಸಾಮೂಹಿಕವಾಗಿ ಮಾಡಬೇಕು. ರಾಮನಾಮ ಜಪದೊಂದಿಗೆ ಧರ್ಮ ಜಾಗೃತಿ, ಹಿಂದುತ್ವದ ರಕ್ಷಣೆ ಆಗುತ್ತದೆ ಎನ್ನುವ ಹಿರಿಯರ ಆಶಯದಂತೆ ಪೂರಕವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಜಾಹೀರಾತು

ಪೂರ್ವಾಹ್ನ 8 ಗಂಟೆಯಿಂದ ಪ್ರಾರ್ಥನೆ, ಪುಣ್ಯಾಹವಾಚನ, ಋತ್ವಿಗ್ವರಣ, ಅಗ್ನಿ ಜನನ, ಸಾರ್ವಜನಿಕ ಮಹಾಸಂಕಲ್ಪ, ಸಾಮೂಹಿಕ ರಾಮತಾರಕ ಜಪ ಯಜ್ಞಾ, ಪೂರ್ಣಾಹುತಿ ಮಹಾಮಂಗಳಾರತಿ , ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ ಭಜನೆ ನಡೆಯಲಿದೆ.

ರಾವಣ ದಹನ ಮತ್ತು ಆಕರ್ಷಕ ಸುಡುಮದ್ದು ಪ್ರದರ್ಶನ :

ರಾತ್ರಿ ರಾವಣ ದಹನ ಮತ್ತು ಆಕರ್ಷಕ ಸುಡುಮದ್ದು ಪ್ರದರ್ಶನ ನಡೆದು ಕಲಶ ವಿಸರ್ಜನೆಯೊಂದಿಗೆ ಕಾರ್ಯಕ್ರಮ ಸಮಾಪನಗೊಳ್ಳಲಿದೆ. ಸುಮಾರು 20 ಅಡಿ ಎತ್ತರದ ರಾವಣ ಪ್ರತಿಕೃತಿ ದಹನ ಕಾರ್ಯಕ್ರಮದ ವಿಶೇಷವಾಗಿರಲಿದೆ ಎಂದು ಅವರು ತಿಳಿಸಿದರು.

ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ :

ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉಪತಹಶೀಲ್ದಾರ್ ಶ್ರೀಧರ್ ಕೋಡಿಜಾಲ್ ಅಧ್ಯಕ್ಷತೆಯಲ್ಲಿ ವಿಹಿಂಪ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ. ಮೋಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವಿಕಾಸ್ ಪುತ್ತೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಪಂಚಭಾಷಾ ಚಲನಚಿತ್ರ ನಟ ಸಚಿನ್ ಸುವರ್ಣ ಭಾಗವಹಿಸಲಿದ್ದಾರೆ. ಹಿಂದೂ ಸಂಘಟನೆಗಳ ವಿವಿಧ ಜಿಲ್ಲೆಗಳ ಮುಖಂಡರಾದ ಸುನಿಲ್ ಕುಮಾರ್ ಕೆ.ಆರ್, ಮುರಳೀಕೃಷ್ಣ ಹಸಂತಡ್ಕ, ಡಾ| ಕೃಷ್ಣಪ್ರಸನ್ನ, ಸತೀಶ್ ಬಿ.ಎಸ್, ಪ್ರೇಮಲತಾ ರಾವ್, ಶ್ರೀಧರ್ ತೆಂಕಿಲ, ಜನಾರ್ದನ ಬೆಟ್ಟ, ಗಣಪತಿ ಭಟ್, ಸುಬ್ರಹ್ಮಣ್ಯ ಭಟ್, ಕೃಷ್ಣಪ್ಪ ಕಲ್ಲಡ್ಕ, ಅರುಣ್ ಕುಮಾರ್ ರೈ, ವಾಸುದೇವ ಕೊಲ್ಲೆಸಾಗು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಮೋತ್ಸವ ಸಮಿತಿ ಗೌರವಾಧ್ಯಕ್ಷ ದೇವಪ್ಪ ಗೌಡ, ವಿಹಿಂಪ ಜಿಲ್ಲಾಧ್ಯಕ್ಷ ಡಾ| ಕೃಷ್ಣಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್., ಬಜರಂಗದಳ ಜಿಲ್ಲಾ ನ್ಯಾಯವಾದಿ ಪ್ರಮುಖ್ ಮಾಧವ ಪೂಜಾರಿ ಉಪಸ್ಥಿತರಿದ್ದರು.

ವರದಿ : ಕಹಳೆ ನ್ಯೂಸ್