Friday, September 20, 2024
ಹೆಚ್ಚಿನ ಸುದ್ದಿ

ಏಳು ತಿಂಗಳ ಬಳಿಕ ಚಿತ್ರಮಂದಿರದಲ್ಲಿ ಕನ್ನಡದ ಮೊದಲ ಸಿನಿಮಾ ಬಿಡುಗಡೆ – ಕಹಳೆ ನ್ಯೂಸ್

ಬೆಂಗಳೂರು: ಲಾಕ್‌ಡೌನ್ ಆರಂಭಕ್ಕೂ ಮುನ್ನ ಬಂದ್ ಆಗಿದ್ದ ಚಿತ್ರಮಂದಿರಗಳು ಕೊನೆಗೂ ಬಾಗಿಲು ತೆರೆಯುತ್ತಿವೆ. ಸುದೀರ್ಘ ಸಮಯದಿಂದ ಚಿತ್ರಮಂದಿರದಲ್ಲಿ ಸಿನಿಮಾ ನೋಡಲಾಗದೆ, ಒಟಿಟಿಯಂತಹ ವೇದಿಕೆಗಳನ್ನು ಅವಲಂಬಿಸಿದ್ದ ಚಿತ್ರ ಪ್ರೇಮಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಕನ್ನಡದ ‘ಆಕ್ಟ್-1978’ ಚಿತ್ರ ಶುಕ್ರವಾರದಿಂದ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿದೆ. ಲಾಕ್‌ಡೌನ್ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಹೊಸ ಚಿತ್ರ ಇದು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ ಸುಮಾರು 50 ಚಿತ್ರಮಂದಿರಗಳಲ್ಲಿ ‘ಆಕ್ಟ್ 1978’ ಚಿತ್ರ ತೆರೆಕಾಣುತ್ತಿದೆ. ‘ಹರಿವು’, ‘ನಾತಿಚರಾಮಿ’ಯಂತಹ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳನ್ನು ನೀಡಿರುವ ನಿರ್ದೇಶಕ ಮಂಸೋರೆ ಅವರ ಈ ಚಿತ್ರ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ ಗುರುವಾರ ಪ್ರೀಮಿಯರ್ ಪ್ರದರ್ಶನ ಕಂಡಿದೆ. ಚಿತ್ರರಂಗದ ಅನೇಕ ಗಣ್ಯರು ಚಿತ್ರಮಂದಿರಕ್ಕೆ ಆಗಮಿಸಿ ಸಿನಿಮಾ ವೀಕ್ಷಿಸಿದ್ದಾರೆ.

ಜಾಹೀರಾತು

ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಭಾರತದಲ್ಲಿ ಆರಂಭವಾಗುತ್ತಿದ್ದಂತೆಯೇ ಮೊದಲು ಮುಚ್ಚಿದ್ದು ಚಿತ್ರಮಂದಿರಗಳನ್ನು. ಹೀಗಾಗಿ ಅಂದಿನಿಂದ ಮನರಂಜನಾ ಜಗತ್ತು ಅಕ್ಷರಶಃ ಸ್ತಬ್ಧಗೊಂಡಿತ್ತು. ಚಿತ್ರಮಂದಿರಗಳಲ್ಲಿ ಸೋಂಕು ಹರಡಲು ಹೆಚ್ಚಿನ ಸಂಭವ ಇರುವುದರಿಂದ ಅವುಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿರಲಿಲ್ಲ.

ಈಗ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಚಿತ್ರಮಂದಿರಗಳನ್ನುತೆರೆಯಲಾಗಿದೆ. ಲಾಕ್‌ಡೌನ್‌ಗೂ ಮುನ್ನ ಚಿತ್ರಮಂದಿರಗಳು ಮುಚ್ಚುವಾಗ ಓಡುತ್ತಿದ್ದ ಸಿನಿಮಾಗಳನ್ನು ಮೊದಲು ಬಿಡುಗಡೆ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಹೊಸ ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ.
‘ಆಕ್ಟ್ 1978’ ಚಿತ್ರದ ಮೂಲಕ ಕನ್ನಡದಲ್ಲಿ ಸಿನಿಮಾ ಮನರಂಜನೆ ಲೋಕ ಮತ್ತೆ ಚಿಗುರಿದೆ. ಚಿತ್ರಮಂದಿರದಲ್ಲಿ ಒಂದು ಸೀಟಿನ ಅಂತರ, ಮಾಸ್ಕ್ ಧರಿಸುವಿಕೆ, ಸ್ಯಾನಿಸೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವಿಕೆಯ ಕಡ್ಡಾಯ ನಿಯಮಗಳ ಪಾಲನೆಯ ಜತೆಯಲ್ಲಿ ಸಿನಿಮಾವನ್ನು ಅನಂದಿಸಬಹುದು.