1985ರಿಂದ ಸತತವಾಗಿ ನಡೆಯುತ್ತಿದ್ದ ‘ಇಂದಿರಾಗಾಂಧಿ ಮ್ಯಾರಥಾನ್ ರೇಸ್’ಗೆ ಬ್ರೇಕ್: ಕಾರಣವೇನು ? – ಕಹಳೆ ನ್ಯೂಸ್
ಉತ್ತರ ಪ್ರದೇಶ: ಮಾಜಿ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರ ಜನ್ಮದಿನದ ಸವಿನೆನಪಿಗಾಗಿ 1985 ರಿಂದ ನಡೆಸಿಕೊಂಡು ಬರಲಾಗುತ್ತಿದ್ದ ‘ಇಂದಿರಾ ಗಾಂಧಿ ಮ್ಯಾರಾಥಾನ್ ಓಟ’ವನ್ನು ಕೋವಿಡ್-19 ಕಾರಣದಿಂದ ನಿಗದಿತ ದಿನಾಂಕದಂದು ನಡೆಸುವಲ್ಲಿ ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದೆ.
1990ರ ನವೆಂಬರ್ 19 ರಂದು ಕೂಡ ಈ ಮ್ಯಾರಥಾನ್ ಓಟವನ್ನು ನಡೆಸಲು ಯುಪಿ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಆದರೆ 1990-91ರ ವಾರ್ಷಿಕ ಕ್ಯಾಲೆಂಡರ್ ನ 1991ರ ಜನವರಿಯಲ್ಲಿ ಈ ಓಟವನ್ನು ಆಯೋಜಿಸಿತ್ತು. ಈ ಮ್ಯಾರಾಥಾನ್ ಪರಿಕಲ್ಪನೆ ಮಾಜಿ ಪ್ರಧಾನಿ ಇಂದಿರಾಗಾಧಿಯವರ ಜನ್ಮದಿನದ ಅಂಗವಾಗಿ ರೂಪುಗೊಂಡಿತ್ತು. ಆರಂಭದಲ್ಲಿ ಮೊದಲ ಬಹುಮಾನ ವಿಜೇತರಿಗೆ 50 ಸಾವಿರ ನೀಡಲಾಗುತ್ತಿತ್ತು. ಹಾಗೂ ಮೊದಲ ಹಾಗೂ ಎರಡನೇ ರನ್ನರ್ ಅಪ್ ಗಳಿಗೆ ತಲಾ 25 ಸಾವಿರ ಹಾಗೂ 15 ಸಾವಿರ ನೀಡಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಬಹುಮಾನ ಮೊತ್ತವನ್ನು 1ಲಕ್ಷಕ್ಕೆ ಏರಿಸಲಾಗಿತ್ತು. ಕಳೆದೆರಡು ವರ್ಷಗಳಿಂದ ಮಹಿಳಾ ಮತ್ತು ಪುರುಷ ವಿಜೇತ ಸ್ಪರ್ಧಿಗಳಿಗೆ ತಲಾ 2 ಲಕ್ಷ ಬಹುಮಾನ ಹಣವನ್ನು ನೀಡಲಾಗುತ್ತಿತ್ತು. ಮೊದಲ ಮತ್ತು ಎರಡನೇ ರನ್ನರ್ ಅಪ್ ಸ್ಥಾನಿಗಳಿಗೆ ತಲಾ 1 ಲಕ್ಷ ಮತ್ತು 75 ಸಾವಿರದ ಜೊತೆಗೆ 11 ಮಂದಿಗೆ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಗುತ್ತಿತ್ತು.
ಒಟ್ಟು 42.195 ಕಿ.ಮೀ ದೂರವಿರುವ ಈ ಮ್ಯಾರಥಾನ್ ಓಟ ನೆಹರೂ ಮನೆತನದ ಪೂರ್ವಜರ ಕುಟುಂಬದವರ ಸ್ಥಳವಾದ ಆನಂದಭವನದಿಂದ ಆರಂಭಗೊಂಡು, ಮಧನ್ ಮೋಹನ್ ಮಾಳವಿಯ ಕ್ರೀಡಾಂಗಳದಲ್ಲಿ ಅಂತ್ಯಗೊಳ್ಳುತ್ತಿತ್ತು. ಈ ಓಟವು ಪ್ರರ್ತಿವರ್ಷ ದೇಶದ ಅತೀ ದೂರದ ಓಟಗಾರರು ಭಾಗವಹಿಸುತ್ತಿದ್ದ ಶ್ರೀಮಂತ ಪರಂಪರೆಯ ಕ್ರೀಡಾಕೂಟ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಕೋವಿಡ್ ನ ಕಾರಣದಿಂದ ಈ ವರ್ಷ ಮ್ಯಾರಾಥಾನ್ ಗೆ ಕಂಟಕ ಎದುರಾಗಿದ್ದು, ಪ್ರಸಕ್ತ ಸಾಲಿನ ಕ್ರೀಡಾ ಕ್ಯಾಲೆಂಡರ್ ನಲ್ಲಿ ಜರುಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದಿಲ್ಲ ಎಂದು ಜಿಲ್ಲಾ ಕ್ರೀಡಾ ಅಧಿಕಾರಿ ಅನಿಲ್ ತಿವಾರಿ ತಿಳಿಸಿದ್ದಾರೆ.