ಪುತ್ತೂರು: ಸಮಕಾಲೀನ ಸಂಗತಿಗಳಿಗೆ ಮುಖಾಮುಖಿಯಾಗುತ್ತಲೇ ಪುರಾಣದ ಒಳಸುಳಿಗಳನ್ನು ಬಿಚ್ಚುತ್ತಾ ಹೋಗುವ ನಾಟಕ ಶಿಖಂಡಿ. ಈ ಕೃತಿಯನ್ನು ಓದುತ್ತಾ ಸಾಗಿದಂತೆ ಅದು ಓದುಗರನ್ನು ಆವರಿಸಿ ಸಾರ್ವತ್ರಿಕ ಚಿಂತನೆಗಳಿಗೆ ಪ್ರೇರೇಪಿಸುತ್ತಾ ಸಾಗುತ್ತದೆ ಎಂದು ಆಂಧ್ರಪ್ರದೇಶದ ಕುಪ್ಪಂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ದುರ್ಗಾಪ್ರವೀಣ ಎಂ.ಎಸ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಸಾಹಿತಿ ಡಾ.ಶ್ರೀಧರ ಎಚ್.ಜಿ ಅವರು ರಚಿಸಿರುವ ಶಿಖಂಡಿ – ಬಿಡುಗಡೆಯ ಕಥನ ಎಂಬ ಕೃತಿಯನ್ನು ಆನ್ ಲೈನ್ ಮೂಲಕ ಬಿಡುಗಡೆಗೊಳಿಸಿ ಭಾನುವಾರ ಮಾತನಾಡಿದರು. ಮಹಾಭಾರತದ ಶಿಖಂಡಿ ಪಾತ್ರವನ್ನು ಮುಖ್ಯ ಪಾತ್ರವನ್ನಾಗಿಸಿಕೊಂಡು ಡಾ.ಶ್ರೀಧರ ಎಚ್.ಜಿ ಯವರು ರಚನೆಯಾಗಿರುವ ವಿಶಿಷ್ಟ ಕೃತಿ ರಚನೆ ಮಾಡಿದ್ದಾರೆ. ಹೆಣ್ಣಿನ ಮೇಲಾದ ದೌರ್ಜನ್ಯ, ಪಶ್ಚಾತ್ತಾಪ, ವಾಗ್ವಾದ, ಗೊಂದಲದ ಸಂದರ್ಭಗಳಲ್ಲಿ ಅಂತರಂಗದ ತಲ್ಲಣಗಳು, ಮುಖ್ಯವಾಗಿ ಗಂಡು ಹೆಣ್ಣಾಗುವ, ಹೆಣ್ಣು ಗಂಡಾಗುವ ಲಿಂಗ ಪರಿವರ್ತನೆಯ ಕಥಾನಕವನ್ನು ಹೊಂದಿರುವ ಈ ಪೌರಾಣಿಕ ನಾಟಕ ಪ್ರಯೋಗಕ್ಕೆ ಸೊಗಸಾಗಿ ಒಡ್ಡಿಕೊಳ್ಳಬಹುದಾದ ಕಥಾವಸ್ತುವೆನಿಸಿದೆ ಎಂದರು.
ಶಿಖಂಡಿ-ಬಿಡುಗಡೆಯ ಕಥನ ಎಂಬ ಶೀರ್ಷಿಕೆಯೇ ಓದುಗ ವರ್ಗಕ್ಕೆ ಅನೇಕ ಹೊಸ ಮಜಲುಗಳತ್ತ ಚಿತ್ತ ಹರಿಸುವಂತೆ ಮಾಡುತ್ತದೆ. ನಾಟಕವನ್ನು ಓದಿದ ನಂತರ ಸಹೃದಯರಲ್ಲಿ ಮೂಡುವ ಪ್ರಶ್ನೆಗಳಿಗೆ ಪೌರಾಣಿಕ ನೆಲೆಗಟ್ಟಿನಲ್ಲೇ ಉತ್ತರ ಕಂಡುಕೊಳ್ಳಬೇಕಾಗಿದೆ. ‘ಬಿಡುಗಡೆ’ ಎಂಬ ಶಬ್ದಕ್ಕೆ ಇಲ್ಲಿ ಹಲವು ಆಯಾಮಗಳಿವೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಓದುವ ಪಠ್ಯವಾಗಿ,
ರಂಗಕರ್ಮಿಗಳಿಗೆ ರಂಗಪಠ್ಯವಾಗಿ ಹೊಸ ಆಲೋಚನೆ, ಅಧ್ಯಯನ, ಸಂಶೋಧನೆ, ವಿಮರ್ಶೆಗೆ ಅನುಕೂಲವಾಗುವಂತೆ ನಾಟಕ ರಚನೆಗೊಂಡಿದ್ದು, ಉತ್ತಮ ನಾಟಕವಾಗಬಲ್ಲಂತಹ ಎಲ್ಲಾ ಲಕ್ಷಣಗಳು ಈ ಕೃತಿಗಿದೆ ಎಂದು ಅಭಿಪ್ರಾಯಪಟ್ಟರು. ಒಟ್ಟು 17 ದೃಶ್ಯಗಳನ್ನೊಳಗೊಂಡ ಈ ನಾಟಕ, ಓದುಗರ ಮನತಲುಪುವಲ್ಲಿ ಯಶಸ್ವಿಯಾಗುತ್ತದೆ.
ನಾಟಕದಲ್ಲಿ ಬರುವ ಅಷ್ಟೂ ಪಾತ್ರಗಳೂ ಸಮರ್ಥವಾಗಿ ರೂಪುಗೊಂಡಿವೆ. ಸೂತ್ರಧಾರನ ಪಾತ್ರ ಪ್ರಾಚೀನ ನಾಟಕಗಳ ಆಧುನಿಕ ರೂಪವಾಗಿ ಪ್ರತಿಬಿಂಬಿತವಾಗಿದೆ. ಪೌರಾಣಿಕ ನಾಟಕವಾದರೂ ವರ್ತಮಾನದ ಸ್ಪರ್ಶ, ಭೀಷ್ಮ ಹಾಗೂ ಶಿಖಂಡಿಯ ನಡುವಿನ ಸಂವಾದದ ಹೊಸ ಸೃಷ್ಟಿ, ನಾಟಕೀಯ ಸನ್ನಿವೇಶಗಳು, ಕಲ್ಪನೆ ಮತ್ತು ವಾಸ್ತವವನ್ನೂ ಸಮೀಕರಿಸಿದ ಶೈಲಿ, ನಾಟಕದ ಕೆಲವೆಡೆ ಬಳಸಿರುವ ಹಾಸ್ಯಾತ್ಮಕ ಸಂಭಾಷಣೆ, ವಿಪುಲ ರಂಗ ಸಾಧ್ಯತೆಗಳು ಲೇಖಕ ಡಾ.ಶ್ರೀಧರ ಎಚ್.ಜಿ ಅವರ ಯಶಸ್ಸಿಗೆ ಕಾರಣವಾಗುತ್ತದೆ ಎಂದರು. ಕೃತಿಕಾರ ಡಾ.ಶ್ರೀಧರ್ ಎಚ್.ಜಿ ಪ್ರಸ್ತಾವನೆಯ ಮಾತುಗಳನ್ನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮವನ್ನು ಗೂಗುಲ್ ಮೀಟ್‍ನ ಜೊತೆಗೆ ಎಸ್.ವಿ.ಎಸ್ ಕ್ರಿಯೇಷನ್ಸ್ ಚಾನಲ್‍ನ ಮೂಲಕ ಯೂಟ್ಯೂಬಿನಲ್ಲೂ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಕರ್ನಾಟಕದ ವಿವಿಧ ಪ್ರದೇಶಗಳಿಂದ ಹಾಗೂ ವಿದೇಶದಿಂದಲೂ ಸಾಹಿತ್ಯಾಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾಂತ್ರಿಕ ವಿಷಯಕ್ಕೆ ಸಂಬಂಧಿಸಿ ಉಪನ್ಯಾಸಕ ಗಣೇಶ್ ಪ್ರಸಾದ್ ಅಡಕೊಡ್ಲು ಮತ್ತು ಶಿವಪ್ರಸಾದ್ ರೈ ಪೆರುವಾಜೆ ಇವರು ಸಹಕರಿಸಿದ್ದರು.