ಪುತ್ತೂರು: ನಗರೋತ್ಥಾನ ಯೋಜನೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 25 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಕಿಲ್ಲೆ ಮೈದಾನದ ಬಳಿ ಗುದ್ದಲಿ ಪೂಜೆ ಮೂಲಕ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ನೇತೃತ್ವದಲ್ಲಿ ಬುಧವಾರ ಚಾಲನೆ ನೀಡಲಾಯಿತು.
ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ನಾಮ ನಿರ್ದೇಶಿತ ಸದಸ್ಯರಾದ ಮಹೇಶ್, ದಿಲೀಪ್ ಮೊಟ್ಟೆತ್ತಡ್ಕ, ಜೋಕಿಂ ಡಿ’ಸೋಜಾ, ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಪ್ರಮುಖರಾದ ರೋಶನ್ ರೈ, ಪ್ರಸನ್ನ ಕುಮಾರ್ ರೈ, ನಗರಸಭಾ ಎಇಇ ಪುರಂದರ, ಕಾಮಗಾರಿಯ ಗುತ್ತಿಗೆದಾರರು ಉಪಸ್ಥಿತರಿದ್ದರು.
ವಿವಿಧ ಕಾಮಗಾರಿ
ನಗರಸಭೆಯ ಮುಂಭಾಗದಲ್ಲಿ ಮತ್ತು ಸಾಮೆತ್ತಡ್ಕ ಕೆ.ಎಚ್.ಬಿ. ಕಾಲನಿ ಬಳಿ ಪಾರ್ಕ್ ಅಭಿವೃದ್ಧಿಗೆ (1 ಕೋಟಿ ರೂ.), ಹಳೆ ಪುರಸಭೆ ಕಚೇರಿ ಸ್ಥಳದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣ, ದರ್ಬೆ, ಬೊಳುವಾರು, ಮೊಟ್ಟೆತ್ತಡ್ಕ, ಬನ್ನೂರಿನಲ್ಲಿ ತರಕಾರಿ ಮತ್ತು ಮೀನು ಮಾರುಕಟ್ಟೆ ರಚನೆ (1 ಕೋಟಿ ರೂ.), ಮುಖ್ಯರಸ್ತೆಯಿಂದ ಎಂ.ಟಿ. ರಸ್ತೆ ಬದಿ ಚರಂಡಿ ಫುಟ್‌ಪಾತ್ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿ (75 ಲಕ್ಷ ರೂ.), ನೆಲ್ಲಿಕಟ್ಟೆ ಖಾಸಗಿ ಬಸ್ಸು ನಿಲ್ದಾಣ ಸಂಪರ್ಕ ರಸ್ತೆ ಅಗಲ ಕಾಮಗಾರಿ ಮತ್ತು ಎಂಜಿ ರಸ್ತೆ ಬದಿ ಚರಂಡಿ ನಿರ್ಮಾಣ, ಮಡಿವಾಳಕಟ್ಟೆ ಸೇತುವೆಯಿಂದ ಮುಂದಕ್ಕೆ ರಸ್ತೆ ನಿರ್ಮಾಣ (50 ಲಕ್ಷ ರೂ.), ಬೊಟ್ಟತ್ತಾರು ಬ್ರಹ್ಮನಗರ ಪ.ಜಾತಿ ಕಾಲನಿ, ಗಡಿಕಲ್ಲು ನೆಕ್ಕರೆ ಪ.ಜಾತಿ ಕಾಲನಿ, ಕೆರೆಮೂಲೆ ಕಾಲನಿ ರಸ್ತೆಗೆ (1 ಕೋ.ರೂ.), ನಗರಸಭಾ ಕಚೇರಿ ಮುಂಭಾಗದಲ್ಲಿ ಸಾಮೆತ್ತಡ್ಕ ಕೆ.ಎಚ್.ಬಿ. ಕಾಲನಿ ಬಳಿ ಪಾರ್ಕ್ ಗೆ (1 ಕೋ.ರೂ.).