ಕೊಲ್ಕತ್ತಾ : ಪಶ್ಚಿಮ ಬಂಗಾಳದ ನಾರ್ತ್ 24 ಪರಗಣಾ ಜಿಲ್ಲೆಯ ಖರ್ಡಾಹ್ ಎಂಬಲ್ಲಿನ ಬಲರಾಂಪುರ್ ಬಸು ಆಸ್ಪತ್ರೆಯ ವೈದ್ಯರು ಕಳೆದ ವಾರ ಮೃತಪಟ್ಟಿದ್ದಾರೆಂದು ಘೋಷಿಸಲ್ಪಟ್ಟಿದ್ದ 75 ವರ್ಷದ ಕೋವಿಡ್ ರೋಗಿಯೊಬ್ಬರ ಅಂತ್ಯಕ್ರಿಯೆ ಮುಗಿದು ನಂತರ ಅವರ ಶ್ರಾದ್ಧ ಕಾರ್ಯಕ್ರಮ ನಡೆಯುತ್ತಿರುವ ವೇಳೆ ಅವರು ಸತ್ತಿಲ್ಲ, ಬದುಕಿದ್ದಾರೆ ಎಂದು ಕುಟುಂಬಕ್ಕೆ ತಿಳಿದು ಬಂದ ವಿಲಕ್ಷಣ ಘಟನೆ ವರದಿಯಾಗಿದೆ.
ಶಿಬ್ದಾಸ್ ಬ್ಯಾನರ್ಜಿ ಎಂಬ ವ್ಯಕ್ತಿಯ ವಿಚಾರದಲ್ಲಿ ಆಸ್ಪತ್ರೆಯಿಂದಾದ ಈ ಪ್ರಮಾದ ಕುರಿತಂತೆ ತನಿಖೆ ನಡೆಸಲು ಆರೋಗ್ಯ ಇಲಾಖೆ ನಾಲ್ಕು ಸದಸ್ಯರ ತನಿಖಾ ಸಮಿತಿ ರಚಿಸಿದ್ದು ತನಿಖಾ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆಗೆ ಕಳುಹಿಸಲಾಗಿದೆ, ಮೇಲಧಿಕಾರಿಗಳ ಶಿಫಾರಸಿನಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ತಪಸ್ ರಾಯ್ ಹೇಳಿದ್ದಾರೆ. ಶಿಬ್ದಾಸ್ ಬ್ಯಾನರ್ಜಿಯದ್ದೆಂದು ಹೇಳಿ ಆಸ್ಪತ್ರೆ ಅವರ ಕುಟುಂಬಕ್ಕೆ ಹಸ್ತಾಂತರಿಸಿದ್ದ ಕಳೇಬರ 75 ವರ್ಷದ ಮೋಹಿನಿಮೋನ್ ಮುಖರ್ಜಿ ಅವರಿಗೆ ಸೇರಿದ್ದಾಗಿತ್ತು. ಶಿಬ್ದಾಸ್ ಬ್ಯಾನರ್ಜಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ ದಿನವೇ ಇವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹಾಗೂ ಅವರನ್ನು ನವೆಂಬರ್ 7ರಂದು ಬರಾಸತ್‍ನಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಖರ್ಡಾಹ್ ಆಸ್ಪತ್ರೆಯು ಬರಾಸತ್ ಕೋವಿಡ್ ಆಸ್ಪತ್ರೆಗೆ ಬ್ಯಾನರ್ಜಿ ಅವರ ವೈದ್ಯಕೀಯ ವರದಿಗಳನ್ನು ಸಲ್ಲಿಸಿದ್ದರಿಂದ ಈ ಪ್ರಮಾದ ಉಂಟಾಗಿತ್ತು.
ಮೋಹಿನಿಮೋನ್ ಮುಖರ್ಜಿ ಮೃತಪಟ್ಟಾಗ ಬರಾಸತ್ ಆಸ್ಪತ್ರೆ ಅಧಿಕಾರಿಗಳು ಶಿಬ್ದಾಸ್ ಬ್ಯಾನರ್ಜಿ ಕುಟುಂಬಕ್ಕೆ ಮಾಹಿತಿ ನೀಡಿ ಮೃತದೇಹವನ್ನು ಹಸ್ತಾಂತರಿಸಿದ್ದರು. ಕೋವಿಡ್ ರೋಗಿಯ ಶವವಾಗಿದ್ದರಿಂದ ಅದನ್ನು ಸಂಪೂರ್ಣವಾಗಿ ಮುಚ್ಚಿದ್ದರಿಂದ ದೂರದಿಂದಲೇ ಮೃತದೇಹವನ್ನು ನೋಡಿದ ನಂತರ ಕುಟುಂಬ ಅಂತ್ಯಕ್ರಿಯೆ ನಡೆಸಿತ್ತು. ತರುವಾಯ ಬ್ಯಾನರ್ಜಿ ಶುಕ್ರವಾರ ಚೇತರಿಸಿಕೊಂಡ ನಂತರ ಆಸ್ಪತ್ರೆಯ ಅಧಿಕಾರಿಗಳು ಮೋಹಿನಿಮೋನ್ ಮುಖರ್ಜಿ ಕುಟುಂಬಕ್ಕೆ ಕರೆ ಮಾಡಿ ಅವರನ್ನು ಮನೆಗೆ ಕರೆದುಕೊಂಡು ಹೋಗಬಹುದು ಎಂದಿದ್ದರು. ಕುಟುಂಬ ಆಸ್ಪತ್ರೆಗೆ ಬಂದು ಅಲ್ಲಿರುವವರು ತಮ್ಮ ಕುಟುಂಬ ಸದಸ್ಯರಲ್ಲ ಎಂದು ತಿಳಿದು ಬರುತ್ತಲೇ ಆಸ್ಪತ್ರೆಯ ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ನಂತರ ಶಿಬ್ದಾಸ್ ಬ್ಯಾನರ್ಜಿ ಕುಟುಂಬಕ್ಕೆ ಮಾಹಿತಿ ನೀಡಿದ್ದು ಅವರು ಬಂದು ಅವರನ್ನು ಕರೆದುಕೊಂಡು ಹೋಗಿದ್ದಾರೆ.