ಲಂಡನ್: ಪೊಲೀಸ್ ಇಲಾಖೆಯಲ್ಲಿ ನಾಯಿಗಳ ಬಳಕೆ ಹೊಸದೇನೂ ಅಲ್ಲ. ಕಳ್ಳರನ್ನು, ಬಾಂಬ್‌ಗಳನ್ನು ಪತ್ತೆ ಮಾಡಲು ಇವುಗಳನ್ನು ಬಳಸಲಾಗುತ್ತಿದೆ. ಆದರೆ ಇದೀಗ ಕರೊನಾ ವೈರಸ್ ಪತ್ತೆಗೂ ನಾಯಿಗಳನ್ನು ಬಳಸಿಕೊಳ್ಳಲಾಗುತ್ತಿದೆ!
ಕರೊನಾದ 2ನೇ 3ನೇ ಅಲೆಗಳು ಶುರುವಾಗಿ ಮತ್ತೆ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ಪರೀಕ್ಷೆ ಹಚ್ಚಲು ಕಷ್ಟವಾಗುತ್ತಿರುವುದನ್ನು ಮನಗಂಡಿರುವ ಕೆಲ ಸಂಶೋಧಕರು ಇದೀಗ ನಾಯಿಗೆ ತರಬೇತಿ ನೀಡುತ್ತಿದ್ದಾರೆ! ಕರೊನಾ ಸೋಂಕಿತರ ಸೇವೆಯಲ್ಲಿ ಹಲವಾರು ಕಡೆಗಳಲ್ಲಿ ರೋಬಾಟ್ಗಳನ್ನು ರೂಪಿಸಿದ್ದಾಯಿತು. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಸಂಶೋಧಕರು ನಾಯಿಯ ಮೊರೆ ಹೋಗಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ಸೋಂಕಿನ ಕುರಿತು ಕೂಡಲೇ ನಿಖರ ಫಲಿತಾಂಶ ಪಡೆಯಲು ಸಾಧ್ಯವಿಲ್ಲ. ಆಂಟಿಜನ್, ಆರ್‌ಟಿ ಪಿಸಿಆರ್ ಇತ್ಯಾದಿ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಪರೀಕ್ಷೆ ಸಮಯದ ಜತೆ ಕಿಟ್‌ಗಳಿಗೂ ಖರ್ಚು ಇದೆ. ಈ ಕಾರಣಕ್ಕೆ ನಾಯಿಗಳ ಮೂಲಕ ಕೊರೊನಾ ವೈರಸ್ ಪತ್ತೆ ಹಚ್ಚಲು ವಿಜ್ಞಾನಿಗಳು ಮುಂದಾಗಿದ್ದಾರೆ.
ಲಂಡನ್ ಮತ್ತು ಅಮೆರಿಕದಲ್ಲಿ ಈಗಾಗಲೇ ನಾಯಿಗಳಿಗೆ ತರಬೇತಿ ನೀಡುವ ಕಾರ್ಯ ಬಹುತೇಕ ಯಶಸ್ವಿಯಾಗಿದೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಲ್ಯಾಬ್ರಡಾರ್ ರಿಟ್ರೈವರ್ ತಳಿಯ ಎಂಟು ನಾಯಿಗಳಿಗೆ ತರಬೇತಿ ನೀಡಿದ್ದಾರೆ. ಕರೊನಾ ವೈರಸ್‌ಗೆ ಸಂಬಂಧಿಸಿದ ವಾಸನೆಯನ್ನು ಗ್ರಹಿಸುವ ಮೂಲಕ ಇವು ಸೋಂಕಿತರನ್ನು ಪರೀಕ್ಷಿಸಬಹುದೇ ಎಂಬ ಬಗ್ಗೆ ಸಂಶೋಧನೆ ನಡೆಯಲಾಗುತ್ತಿದೆ. ಈ ಕುರಿತಂತೆ ನಾಯಿಗಳಿಗೆ ತರಬೇತಿಯನ್ನೂ ನೀಡಲಾಗುತ್ತಿದೆ.
ಈಗ ಸ್ನಿಫರ್ ತಳಿಯ ನಾಯಿಗಳಿಗೆ ತರಬೇತಿ ನೀಡಲಾಗಿದೆ. ಕರೊನಾ ವೈರಸ್ ಆರಂಭದಲ್ಲಿ ಅಮೆರಿಕ, ಯುಎಇ, ಫಿನ್‌ಲ್ಯಾಂಡ್, ಲೆಬನಾನ್ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಬೆವರಿನಲ್ಲಿ ಕೋವಿಡ್ 19 ವೈರಸ್ ಪತ್ತೆ ಹಚ್ಚಲು ಪ್ರಯೋಗಿಕವಾಗಿ ಸ್ನಿಫರ್ ನಾಯಿಗಳನ್ನು ಬಳಸಲಾಗಿತ್ತು. ಲೆಬನಾನ್ ಮತ್ತು ಫಿನ್‌ಲ್ಯಾಂಡ್‌ನಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಸ್ನಿಫರ್ ನಾಯಿಗಳು ಕರೊನಾ ವೈರಸ್ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದವು.
ಪಶು ವೈದ್ಯ ಮತ್ತು ನರ ವಿಜ್ಞಾನಿ ಹೊಲ್ಗರ್ ವೋಲ್ಕ್, ಸರಿಯಾಗಿ ತರಬೇತಿ ನೀಡಿದರೆ ಕರೋನವೈರಸ್ ಅನ್ನು ನಾಯಿಗಳು ಪತ್ತೆಹಚ್ಚಬಹುದು ಎಂದು ವಿಶ್ವಾಸದಿಂದ ಹೇಳಿದ್ದಾರೆ. ಈಗಾಗಲೇ ಇವರು ವೈರಸ್ ಪತ್ತೆ ಹಚ್ಚುವ ಸಂಬಂಧ ನಾಯಿಗಳಿಗೆ ತರಬೇತಿ ನೀಡುತ್ತಿದ್ದಾರೆ.
ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಫಿಕಲ್ ಮೆಡಿಸಿನ್‌ನ ಸಂಶೋಧಕರು ಈ ನಿಟ್ಟಿನಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಮನುಷ್ಯರಲ್ಲಿ ಮಲೇರಿಯಾ ಸೋಂಕನ್ನು ಗುರುತಿಸುವಲ್ಲಿ ಈಗಾಗಲೇ ಕೆಲವು ತಳಿಗಳ ನಾಯಿಗಳು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈಗ ಕರೊನಾ ಸೋಂಕಿನ ಗುರುತಿಸುವಿಕೆಯ ಪ್ರಯತ್ನಕ್ಕೆ ಕೈಹಾಕಲಾಗಿದೆ.
ಲೆಬನಾನ್‌ನಲ್ಲಿ 1,680 ಪ್ರಯಾಣಿಕರನ್ನು ನಾಯಿಗಳು ಪರೀಕ್ಷೆ ಮಾಡಿ 158 ಮಂದಿಗೆ ಸೋಂಕು ಇದೆ ತಿಳಿಸಿತ್ತು. ಬಳಿಕ ಇವರ ಗಂಟಲ ಮಾದರಿಯನ್ನು ತೆಗೆದು ಪಿಸಿಆರ್ ಪರೀಕ್ಷೆ ಮಾಡಿದಾಗಲೂ ಸೋಂಕು ಇರುವುದು ದೃಢಪಟ್ಟಿತ್ತು.
ಇದು ತುಂಬಾ ನಿಖರ, ಕಾರ್ಯಸಾಧ್ಯ, ಅಗ್ಗ ಎಂದು ಲೆಬನಾನ್ ಬೈರುತ್ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಶಸ್ತ್ರ ಚಿಕಿತ್ಸಕ ಮತ್ತು ಸಂಶೋಧಕ ರಿಯಾದ್ ಸರ್ಕಿಸ್ ಹೇಳಿದ್ದಾರೆ.
ನಾಯಿಗಳು ಕರೊನಾ ಸೋಂಕಿತರನ್ನು ವಾಸನೆ ಗ್ರಹಿಸುವ ಮೂಲಕ ಗುರುತಿಸುವಲ್ಲಿ ಯಶಸ್ವಿಯಾದರೆ, ಅದನ್ನು ಮುಂದಿನ ದಿನಗಳಲ್ಲಿ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ, ಆಸ್ಪತ್ರೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಯೋಜನೆಗೊಳಿಸಲು ಈಗಾಗಲೇ ತಯಾರಿ ನಡೆಸಲಾಗಿದ್ದು, ಈ ಕುರಿತಂತೆ ಅಮೆರಿಕ ಮತ್ತು ಬ್ರಿಟನ್ ಸಂಶೋಧಕರು ಚರ್ಚೆ ನಡೆಸುತ್ತಿದ್ದಾರೆ. ಇದು ಯಶಸ್ವಿಯಾಗುವ ಸಂಪೂರ್ಣ ವಿಶ್ವಾಸ ಸಂಶೋಧಕರಿಗಿದೆ. ಭಾರತದಲ್ಲಿಯೂ ನಾಯಿಗಳ ಸೇವೆ ಬರುವ ದಿನಗಳು ದೂರವಿಲ್ಲ.