Monday, November 18, 2024
ಹೆಚ್ಚಿನ ಸುದ್ದಿ

ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ಭಾರತ ಮೂಲದ ನ್ಯೂಜಿಲೆಂಡ್ ಸಂಸದ – ಕಹಳೆ ನ್ಯೂಸ್

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್‌ನ ಅತಿ ಕಿರಿಯರಲ್ಲಿ ಒಬ್ಬರಾದ ಮತ್ತು ನೂತನವಾಗಿ ಆಯ್ಕೆಯಾದ ಭಾರತ ಮೂಲದ ಸಂಸದ ಡಾ. ಗೌರವ್ ಶರ್ಮಾ ಬುಧವಾರ ದೇಶದ ಸಂಸತ್‌ನಲ್ಲಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಹಿಮಾಚಲಪ್ರದೇಶದ ಹಮಿರ್ಪುರದವರದ ಡಾ. ಗೌರವ್ ಶರ್ಮಾ (33) ನ್ಯೂಜಿಲೆಂಡ್‌ನ ಹ್ಯಾಮಿಲ್ಟನ್ ವೆಸ್ಟ್‌ನಿಂದ ಲೇಬರ್ ಪಕ್ಷದ ಸಂಸದರಾಗಿ ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಗೌರವ್ ಶರ್ಮಾ ಅವರು ಬುಧವಾರ ಎರಡು ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನ್ಯೂಜಿಲೆಂಡ್‌ನಲ್ಲಿನ ಭಾರತದ ಹೈಕಮಿಷನರ್ ಮುಕ್ತೇಶ್ ಪರ್ದೇಶಿ ಟ್ವಿಟ್ಟರ್‌ನಲ್ಲಿ ಈ ಮಾಹಿತಿ ನೀಡಿದ್ದಾರೆ. ‘ಶರ್ಮಾ ಅವರು ಮೊದಲು ನ್ಯೂಜಿಲೆಂಡ್‌ನ ಸ್ಥಳೀಯ ಭಾಷೆ ಮಾವೊರಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಬಳಿಕ ಭಾರತದ ಶಾಸ್ತ್ರೀಯ ಭಾಷೆ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಈ ಮೂಲಕ ಭಾರತ ಮತ್ತು ನ್ಯೂಜಿಲೆಂಡ್ ಎರಡರ ಸಾಂಸ್ಕೃತಿ ಸಂಪ್ರದಾಯಕ್ಕೆ ಅಪಾರ ಗೌರವವನ್ನು ತೋರಿಸಿದರು’ ಎಂದು ಅವರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಕ್ಲಂಡ್‌ನಲ್ಲಿ ಎಂಬಿಬಿಎಸ್ ಮತ್ತು ವಾಷಿಂಗ್ಟನ್‌ನಲ್ಲಿ ಎಂಬಿಎ ಪಡೆದಿರುವ ಶರ್ಮಾ ಅವರು, ಹ್ಯಾಮಿಲ್ಟನ್‌ನ ನಾವ್ಟನ್‌ನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು ನ್ಯೂಜಿಲೆಂಡ್ ಮತ್ತು ಭಾರತ ಸೇರಿದಂತೆ ವಿವಿಧ ದೇಶಗಳ ಸಾರ್ವಜನಿಕ ಆರೋಗ್ಯ, ನೀತಿ, ಔಷಧ ಮತ್ತು ಸಲಹೆಗಾರರಾಗಿ ಕೆಲಸ ಮಾಡಿದ್ದರು. 2017ರ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಗೌರವ್ ಶರ್ಮಾ, ಈ ಬಾರಿ ನ್ಯಾಷನಲ್ ಪಾರ್ಟಿಯ ಟಿಮ್ ಮ್ಯಾಸಿಂಡೊ ಅವರನ್ನು ಮಣಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಪ್ರಿಯಾಂಕಾ ರಾಧಾಕೃಷ್ಣನ್ ಅವರು ನ್ಯೂಜಿಲೆಂಡ್‌ನ ಮೊದಲ ಭಾರತ ಮೂಲದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು