ಮೈಸೂರು : ಖ್ಯಾತ ಹಿರಿಯ ಗಾಯಕ ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ಸಂಗೀತ ಪೀಠ ತೆರೆಯಲು ಮೈಸೂರು ವಿವಿ ಸಿಂಡಿಕೇಟ್ ಅನುಮೋದನೆ ನೀಡಿದೆ.
ಸಂಗೀತ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಯ ಉದ್ದೇಶದಿಂದ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ ಸ್ಥಾಪನೆಗೆ ಬುಧವಾರ ನಡೆದ ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ದೊರಕಿದೆ. ಸಂಗೀತದ ಎಲ್ಲಾ ಪ್ರಕಾರಗಳ ಬಹುಮುಖ ಬೆಳವಣಿಗೆಗಾಗಿ ಪೀಠ ಸ್ಥಾಪಿಸಲಾಗುತ್ತಿದೆ.
ವಿವಿಯ ಲಲಿತ ಕಲೆಗಳ ಕಾಲೇಜಿನಲ್ಲಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ ಸ್ಥಾಪನೆ ಮಾಡಲಾಗುತ್ತಿದ್ದು, ಪೀಠಕ್ಕೆ ವಾರ್ಷಿಕ ಐದು ಲಕ್ಷ ಮೀಸಲು ಇಡಲಾಗುತ್ತಿದೆ. ವಿಶೇಷ ಉಪನ್ಯಾಸ, ಕಾರ್ಯಾಗಾರ, ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣ, ಗ್ರಂಥ ಪ್ರಕಟಣೆ ಮುಂತಾದ ಶೈಕ್ಷಣಿಕ ಕಾರ್ಯಗಳನ್ನು ಆಯೋಜನೆ ಮಾಡಲಾಗುತ್ತಿದೆ. ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನದ ನಂತರ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಮೈಸೂರು ವಿಶ್ವವಿದ್ಯಾಲಯದ ಮುಂದೆ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ ಸ್ಥಾಪನೆಯ ಕುರಿತು ಪ್ರಸ್ತಾವವನ್ನು ಇಟ್ಟಿದ್ದರು. ಅದರಂತೆ ವಿವಿ ಸಿಂಡಿಕೇಟ್ ಸಭೆಯಲ್ಲಿ ಅದಕ್ಕೆ ಅನುಮೋದನೆ ಲಭಿಸಿದೆ.