ಮಂಗಳೂರು: ಕೆಲ ತಿಂಗಳ ಹಿಂದೆಯಷ್ಟೇ ಕಾಳುಮೆಣಸಿಗೆ ಕನಿಷ್ಠ ಆಮದು ದರ ನಿಗದಿಪಡಿಸಿದ್ದ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಮತ್ತೊಮ್ಮೆ ರೈತರ ನೆರವಿಗೆ ಮುಂದಾಗಿದ್ದು ಆಮದನ್ನೇ ನಿರ್ಬಂಧಿಸಿ ಆದೇಶಿಸಿದ್ದಾರೆ.
ನೂತನ ಪರಿಷ್ಕರಣೆ ನೀತಿಯ ಪ್ರಕಾರ ಕಾಳುಮೆಣಸು ಆಮದು ನಿರ್ಬಂಧಿಸಲಾಗಿದ್ದು, ಆಮದು ದರ ಪ್ರತಿ ಕೆಜಿಗೆ 500 ರೂ.ಗಿಂತ ಅಧಿಕವಾಗಿದ್ದರೆ ಇದು ಅನ್ವಯವಾಗುವುದಿಲ್ಲ.
ಕಳೆದ ಡಿಸೆಂಬರ್ನಲ್ಲಿ ಕಾಳುಮೆಣಸು ಆಮದು ದರವನ್ನು ಪ್ರತಿ ಕೆ.ಜಿ.ಗೆ 500 ರೂ. ನಿಗದಿ ಪಡಿಸಲಾಗಿತ್ತು. ಆದರೆ ಆಮದು ನಿಷೇಧಿಸಿರಲಿಲ್ಲ. ಇದರಿಂದಾಗಿ ಕೆಲವು ಆಮದುದಾರರು ದಂಡ ಪಾವತಿಸಿ ಸಾರ್ಕ್ ದೇಶಗಳ ಮೂಲಕ ಕಡಿಮೆ ಬೆಲೆಗೆ ಭಾರತಕ್ಕೆ ಕಾಳುಮೆಣಸು ಆಮದು ಮಾಡಿಕೊಳ್ಳುವ ತಂತ್ರ ಅನುಸರಿಸುತ್ತಿದ್ದರು. ಇದು ಸ್ಥಳೀಯ ಕಾಳುಮೆಣಸಿನ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಮತ್ತು ಕಾಳುಮೆಣಸು ಬೆಳಗಾರರ ಸಂಘಗಳ ಒಕ್ಕೂಟದ ಸಂಚಾಲಕ ಕೊಂಕೋಡಿ ಪದ್ಮನಾಭ ಹಾಗೂ ಸಂಯೋಜಕ ವಿಶ್ವನಾಥ ಕೊಡಗು ಸತತವಾಗಿ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಯಾಗಿ, ಸಮಸ್ಯೆಯನ್ನು ಮನಗಾಣಿಸಿದ್ದರು. ಫೆಬ್ರವರಿ 20ರಂದು ಒಕ್ಕೂಟ ಸಚಿವರಿಗೆ ಪತ್ರ ಬರೆದು ಆಮದು ನಿಷೇಧ ಹೇರುವಂತೆಯೂ ಒತ್ತಾಯಿಸಿತ್ತು.
ಕೇಂದ್ರ ಸರ್ಕಾರದ ಆದೇಶದಿಂದ ಮತ್ತೆ ಕಾಳುಮೆಣಸು ಮಾರುಕಟ್ಟೆ ಚಿಗಿತುಕೊಳ್ಳಲಿದೆ, ಕಾಳುಮೆಣಸು ಆಮದು ನಿಷೇಧಿಸಿದ್ದು ಸೂಕ್ತ, ಹಾಗೂ ಬೆಳೆಗಾರರನ್ನು ರಕ್ಷಿಸುವ ಕ್ರಮ. | ಎಸ್.ಆರ್.ಸತೀಶ್ಚಂದ್ರ ಕ್ಯಾಂಪ್ಕೊ ಅಧ್ಯಕ್ಷ ಸಚಿವ ಸುರೇಶ್ ಪ್ರಭು ಸಮಸ್ಯೆ ಅರ್ಥೈಸಿಕೊಂಡು ಆಮದು ನಿಷೇಧ ಮಾಡಿರುವುದರಿಂದ ಕಾಳು ಮೆಣಸು ಧಾರಣೆ ಮೇಲೇರಲಿದೆ. | ಕೊಂಕೋಡಿ ಪದ್ಮನಾಭ ಕಾಳುಮೆಣಸು ಬೆಳೆಗಾರರ ಸಂಘಗಳ ಒಕ್ಕೂಟ