ಬಡವರ ಆಶಾಕಿರಣವಾಗಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಆಶಯದಂತೆ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಕೆಲಸಮಾಡುತ್ತಿದೆ – ಅಶೋಕ್ ಕುಮಾರ್ ರೈ
ಪುತ್ತೂರು: ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್‍ನ ಫಲಾನುಭವಿಗಳ ಮತ್ತು ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ಸಮಾವೇಶ ಮಾ. 25ರಂದು ದರ್ಬೆ ಬೈಪಾಸ್ ಬಳಿಯಿರುವ ಟ್ರಸ್ಟ್‍ನ ಕಚೇರಿಯ ಮುಂಭಾಗದಲ್ಲಿ ನಡೆಯಲಿದೆ ಎಂದು ಟ್ರಸ್ಟ್‍ನ ಮುಖ್ಯ ಪ್ರವರ್ತಕ ಕೆ.ಎಸ್. ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೇಳಿದ್ದಾರೆ.
ಕಹಳೆ ನ್ಯೂಸ್ ಜೊತೆ ಮಾತನಾಡಿದ ಅವರು, ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಪ್ರಮುಖ್ ಅಪ್ಪಯ್ಯ ಮಣಿಯಾಣಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಸಹಿತ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಆಶಯ :
2013ರಲ್ಲಿ ಟ್ರಸ್ಟ್ ಆರಂಭವಾಗಿದ್ದು, ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಆಶಯದಂತೆ ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ಸ್ಪಂದನೆ ವ್ಯಕ್ತಪಡಿಸುವುದು ಟ್ರಸ್ಟ್ ಮೂಲಧ್ಯೇಯವಾಗಿದ್ದು, ಈಗಾಗಲೇ ಟ್ರಸ್ಟ್ ಮೂಲಕ 5,800 ಕುಟುಂಬಗಳ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ಸಮಾವೇಶದಲ್ಲಿ ಟ್ರಸ್ಟ್‍ನಿಂದ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಕಾರ್ಯಯೋಜನೆಗಳನ್ನು ನಡೆಸಲಿದ್ದೇವೆ ಎಂದು ತಿಳಿಸಲಾಗುವುದು ಎಂದರು.
ಸಮಾಜದ ತಳಮಟ್ಟದಲ್ಲಿರುವ ನಿರ್ಗತಿಕ ಕುಟುಂಬಗಳಿಗೆ ಟ್ರಸ್ಟ್‍ನಿಂದ 49 ಮನೆಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ವಿದ್ಯುತ್ ಮತ್ತು ನೀರಿನ ಸೌಲಭ್ಯಗಳನ್ನು ಒದಗಿಸಲಾಗಿದೆ. 250ಕ್ಕೂ ಹೆಚ್ಚು ಕುಟುಂಬಗಳಿಗೆ 94ಸಿ ಮತ್ತು 94ಸಿಸಿಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. 650 ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಾಮಾಗ್ರಿಗಳನ್ನು ವಿತರಿಸಲಾಗಿದೆ. ದೀಪಾವಳಿಯ ಸಂದರ್ಭದಲ್ಲಿ 12,500 ಮಂದಿಗೆ ವಸ್ತ್ರದಾನ ಮಾಡಲಾಗಿದೆ. ಮಂಗಳೂರಿನಲ್ಲಿ 54 ಏಡ್ಸ್ ಪೀಡಿತ ಮಕ್ಕಳ ಸಂಪೂರ್ಣ ಖರ್ಚು ವೆಚ್ಚಗಳನ್ನು ಟ್ರಸ್ಟ್‍ನಿಂದ ಭರಿಸಲಾಗುತ್ತಿದೆ. 1500 ವಿವಿಧ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ, 620 ಮಹಿಳೆಯರಿಗೆ ಟೈಲರಿಂಗ್ ತರಬೇತಿ ಮತ್ತು ಹೊಲಿಗೆ ಯಂತ್ರವನ್ನು ನೀಡಲಾಗಿದೆ. ಅಲ್ಲದೆ ಅಂಗವಿಕಲರ ಪ್ರಮಾಣಪತ್ರ, ಪಾನ್ ಕಾರ್ಡ್ ವ್ಯವಸ್ಥೆ, ಕಟ್ಟಡ ಕಾರ್ಮಿಕರ ನೋಂದಾವಣೆ, ಪಿಎಫ್‍ಗೆ ಆಧಾರ್ ಲಿಂಕ್ ಜೋಡಣೆ, ಉಚಿತ ಡ್ರೈವಿಂಗ್ ತರಬೇತಿ, ಪಾಸ್ ಪೋರ್ಟ್ ವ್ಯವಸ್ಥೆ, ಹೀಗೆ ಮೊದಲಾದ ಸಮಾಜಮುಖಿ ಕಾರ್ಯಗಳನ್ನು ಟ್ರಸ್ಟ್‍ನಿಂದ ಮಾಡಲಾಗಿದೆ ಎಂದರು.
2017-18ನೇ ಸಾಲಿನಲ್ಲಿ ಹಮ್ಮಿಕೊಂಡ ಕಾರ್ಯಗಳಿಗೆ ಟ್ರಸ್ಟ್‍ನಿಂದ ರೂ. 2ಕೋಟಿ 22 ಲಕ್ಷ ವ್ಯಯಿಸಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದನೆ ನೀಡುವುದು ಟ್ರಸ್ಟ್‍ನ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಟ್ರಸ್ಟ್‍ನ ಫಲಾನುಭವಿಗಳಿಗೆ ಮತ್ತು ಶ್ರಮಜೀವಿ ಕಟ್ಟಡ ಕಾರ್ಮಿಕರನ್ನು ಒಟ್ಟು ಸೇರಿಸಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ 5,000 ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲಾ ಫಲಾಪೇಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಅಶೋಕ್ ಕುಮಾರ್ ರೈ ವಿನಂತಿಸಿದರು.
ಅಶೋಕ್ ಕುಮಾರ್ ರೈಯವರ ಸಂಪೂರ್ಣ ಪರಿಚಯ :
https://youtu.be/m79A29ZnWdM