ಕೆಲವೊಮ್ಮೆ ಯಾರ ಊಹೆಗೂ ನಿಲುಕದ್ದ ಸಂಗತಿಗಳು ನಡೆದುಬಿಡುತ್ತವೆ. ಅಂಥದ್ದೇ ಒಂದು ವಿಚಿತ್ರ ಹಾಗೂ ಅಷ್ಟೇ ಕುತೂಹಲ ಎನ್ನುವ ಘಟನೆ ನೈರೋಬಿಯಲ್ಲಿ ನಡೆದಿದ್ದು, ವೈದ್ಯರ ತಂಡವನ್ನೇ ಬೆಚ್ಚಿಬೀಳಿಸಿದೆ. ಸತ್ತಿದ್ದವ ಬದುಕಿ ಬಂದು ವೈದ್ಯರನ್ನೇ ಕಿರುಚುವಂತೆ ಮಾಡಿದ ಘಟನೆ ಇದು.
ಪೀಟರ್ ಕೀಗೆನ್ ಎಂಬ 32 ವರ್ಷದ ಯುವಕನೇ ಈ ರೀತಿ ವೈದ್ಯರಿಗೆ ಗಾಬರಿಹುಟ್ಟಿಸಿದವ. ಅಷ್ಟಕ್ಕೂ ಆಗಿದ್ದೇನೆಂದರೆ ಪೀಟರ್ ತೀವ್ರವಾಗಿ ಹೊಟ್ಟೆ ನೋವಿನಿಂದ ನರಳುತ್ತಿದ್ದ. ನಿನ್ನೆ ಏಕಾಏಕಿ ಮನೆಯಲ್ಲಿ ಕುಸಿದು ಬಿದ್ದುಬಿಟ್ಟಿದ್ದಾನೆ. ಕೂಡಲೇ ಇವನನ್ನು ಕೆರಿವೊ ಕೌಂಟಿಯಲ್ಲಿರುವ ಕಪ್ಕಟೇಟ್ ಆಸ್ಪತ್ರೆಗೆ ಮನೆಯವರು ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ ವೈದ್ಯರು ಸಾರಿ, ಈತ ಇನ್ನು ಬದುಕಿಲ್ಲ. ನೀವು ಕರೆದುಕೊಂಡು ಬರುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ಹೇಳಿಬಿಟ್ಟಿದ್ದಾರೆ. ಆಸ್ಪತ್ರೆಯ ಕೆಲವು ನಿಯಮಗಳ ಪ್ರಕಾರ, ಮೃತದೇಹವನ್ನು ಕೂಡಲೇ ನೀಡುವುದಿಲ್ಲ. ಬದಲಿಗೆ ಅದನ್ನು ಶವಗಾರದಲ್ಲಿ ಇಟ್ಟು ಕೆಲವೊಂದು ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪೀಟರ್ನ ‘ಶವ’ವನ್ನು ಶವಾಗಾರದಲ್ಲಿ ಇಡಲು ರೆಡಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮೃತದೇಹ ಕೊಳೆಯದಂತೆ ಸುರಕ್ಷಿತವಾಗಿಡಲು ಶವದ ಬಲ ಕಾಲನ್ನು ಸೀಳಿ ಫಾರ್ಮಾಲಿನ್ ತುಂಬಿದ್ದಾರೆ.
ಇಷ್ಟು ಪ್ರಕ್ರಿಯೆ ಮುಗಿಯುವುದರೊಳಗೆ ಮೂರು ಗಂಟೆಯಾಗಿದೆ. ಇನ್ನೇನು ಆತನನ್ನು ಶವಾಗಾರದಲ್ಲಿ ಇಡಬೇಕು ಎನ್ನುವಷ್ಟರಲ್ಲಿ ಕಾಲು ನೋವು ಎಂದು ಕಿರುಚಿಕೊಂಡ ಪೀಟರ್ ಕಣ್ಣುಬಿಟ್ಟಿದ್ದಾನೆ. ಅವನು ಕಿರುಚಿದ್ದನ್ನು ಕಂಡ ಅಲ್ಲಿಯ ವೈದ್ಯಕೀಯ ಸಿಬ್ಬಂದಿಗೆ ಏನು ಆಯಿತೆಂದು ತಿಳಿಯದೇ ಅವರೂ ಕಿರುಚಿದ್ದಾರೆ. ಆಮೇಲೆ ನೋಡಿದರೆ ಪೀಟರ್ ಸತ್ತಿರಲೇ ಇಲ್ಲ, ಬದಲಿಗೆ ಅವನಿಗೆ ಸ್ಮೃತಿ ತಪ್ಪಿತ್ತಷ್ಟೇ. ತಕ್ಷಣ ಆಸ್ಪತ್ರೆಯ ಸಿಬ್ಬಂದಿ ಪೀಟರ್‍ನನ್ನು ವಾರ್ಡ್‍ಗೆ ಕರೆತಂದು ಚಿಕಿತ್ಸೆ ಕೊಟ್ಟಿದ್ದಾರೆ. ಪೀಟರ್ ಬದುಕಿ ಬಂದಿರುವ ಬಗ್ಗೆ ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.