ನವದೆಹಲಿ : ಇಂದು ಖಗೋಳ ಲೋಕದಲ್ಲಿ ಮಹತ್ವದ ದಿನವಾಗಿದೆ. ಯಾಕೆಂದರೆ ಈ ವರ್ಷದ ನಾಲ್ಕನೇ ಹಾಗೂ ಕೊನೆಯ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಈ ಚಂದ್ರಗ್ರಹಣವು 2020ನೇ ವರ್ಷದ 4ನೇ ಚಂದ್ರಗ್ರಹಣವಾಗಿದೆ. ಈವರೆಗೆ ಈ ವರ್ಷದಲ್ಲಿ ಒಟ್ಟು ಮೂರು ಚಂದ್ರಗ್ರಹಣಗಳು ಸಂಭವಿಸಿವೆ. ವಿಶೇಷ ಎಂದರೆ ಈ ವರ್ಷದ ಕೊನೆಯ ಚಂದ್ರಗ್ರಹಣವು ಕಾರ್ತಿಕ ಪೂರ್ಣಿಮ ದಿನವಾದ ಇಂದು ಸಂಭವಿಸಲಿದ್ದು, ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಇದು ಪೆನಂಬ್ರಲ್ ಚಂದ್ರಗ್ರಹಣವಾಗಿದೆ. ಅಂದರೆ ಭೂಮಿಯು ಸೂರ್ಯ ಹಾಗೂ ಚಂದ್ರನ ನಡುವೆ ಬರುತ್ತದೆ. ಈ ವೇಳೆ ಭೂಮಿಯ ನೆರಳು ಸೂರ್ಯನ ಮೇಲೆ ಬೀಳುತ್ತದೆ. ಭೂಮಿಯು ಸೂರ್ಯನ ಬೆಳಕನ್ನು ತಡೆಯುವುದರಿಂದ ಸೂರ್ಯನ ಬೆಳಕು ಚಂದ್ರನನ್ನು ತಲುಪುವುದಿಲ್ಲ. ಆಗ ಚಂದ್ರಗ್ರಹಣ ಸಂಭವಿಸುತ್ತದೆ.
ಎಲ್ಲೆಲ್ಲಿ ಗ್ರಹಣ ಗೋಚರ? ಪೆನಂಬ್ರಾ ಎಂದು ಕರೆಯಲ್ಪಡುವ ಭೂಮಿಯ ಹೊರಗಿನ ನೆರಳು ಚಂದ್ರನ ಮೇಲೆ ಬೀಳುತ್ತದೆ. ಈ ವರ್ಷದ ಕೊನೆಯ ಚಂದ್ರಹ್ರಗಣವು ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಗೋಚರವಾಗುತ್ತದೆ. ಆದರೆ ಹವಾಮಾನ ವೈಪರೀತ್ಯ ಉಂಟಾದರೆ ಗ್ರಹಣ ಗೋಚರತೆಗೆ ಅಡ್ಡಿಯಾಗಬಹುದೆಂದಯ ಖಗೋಳ ತಜ್ಞರು ಹೇಳಿದ್ದಾರೆ.
ಭಾರತದಲ್ಲಿ ಗ್ರಹಣ ಗೋಚರವಾಗಲಿದೆಯೇ?
ಭಾರತದಲ್ಲಿ ಚಂದ್ರಗ್ರಹಣವು ಗೋಚರವಾಗುವ ಸಮಯವನ್ನು ನೋಡುವುದಾರೆ, ಸೋಮವಾರ ಸಂಭವಿಸುವ ಚಂದ್ರಗ್ರಹಣವು 4 ಗಂಟೆ 21 ನಿಮಿಷಗಳ ಕಾಲ ಗೋಚರವಾಗುತ್ತದೆ. ಗ್ರಹಣದ ಒಂದು ಭಾಗ ಮಾತ್ರ ಭಾರತದಲ್ಲಿ ಗೋಚರವಾಗುತ್ತದೆ ಎಂದು ತಿಳಿದು ಬಂದಿದೆ. ಭಾರತದಲ್ಲಿ ಪಾಟ್ನಾ, ರಾಂಚಿ, ಕೊಲ್ಕತ್ತಾ, ಲಕ್ನೋ, ವಾರಣಾಸಿ ಮತ್ತು ಭುವನೇಶ್ವರ ಈ ನಗರಗಳಲ್ಲಿ ಚಂದ್ರಗ್ರಹಣ ಗೋಚರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಚಂದ್ರಗ್ರಹಣದ ಸಮಯ:ಪೆನಂಬ್ರಲ್ ಚಂದ್ರಗ್ರಹಣ ನವೆಂಬರ್ 30ರ ಮಧ್ಯಾಹ್ನ 1 ಗಂಟೆ 2 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಮಧ್ಯಾಹ್ನ 3 ಗಂಟೆ 12 ನಿಮಿಷಕ್ಕೆ ಉಚ್ಚ್ರಾಯ ಮಟ್ಟದಲ್ಲಿರುತ್ತದೆ. ಕೊನೆಗೆ ಸಂಜೆ 5 ಗಂಟೆ 23 ನಿಮಿಷಕ್ಕೆ ಚಂದ್ರಗ್ರಹಣ ಅಂತ್ಯಗೊಳ್ಳಲಿದೆ.
ಒಟ್ಟು ಮೂರು ವಿಧದ ಚಂದ್ರಗ್ರಹಣಗಳಿವೆ. ಪೂರ್ಣ ಚಂದ್ರಗ್ರಹಣ, ಭಾಗಶಃ ಚಂದ್ರಗ್ರಹಣ ಮತ್ತು ಪೆನಂಬ್ರಲ್ ಚಂದ್ರಗ್ರಹಣ. ಇಂದು ಸಂಭವಿಸಲಿರುವ ಚಂದ್ರಗ್ರಹಣವು ಪೆನಂಬ್ರಲ್ ಚಂದ್ರಗ್ರಹಣವಾಗಿದೆ. ಭೂಮಿಯ ಸೂರ್ಯನಿಗೆ ಅಡ್ಡಬರುವುದಿಂದ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವುದಿಲ್ಲ. ಸೂರ್ಯನ ಬೆಳಕು ನೇರವಾಗಿ ಚಂದ್ರನಿಗೆ ತಲುಪಲು ಭೂಮಿಯು ಭಾಗಶಃ ನಿರ್ಬಂಧಿಸುತ್ತದೆ. ಈ ವೇಳೆ ಪೆನಂಬ್ರಲ್ ಚಂದ್ರಗ್ರಹಣ ಸಂಭವಿಸುತ್ತದೆ.
ಈ ವರ್ಷ ಒಟ್ಟು ನಾಲ್ಕು ಪೆನಂಬ್ರಲ್ ಚಂದ್ರಗ್ರಹಣಗಳು ಸಂಭವಿಸುತ್ತವೆ ಎಂದು ಅಂದಾಜಿಸಲಾಗಿತ್ತು. ಈಗಾಗಲೇ ಮೂರು ಚಂದ್ರಗ್ರಹಣಗಳು ಸಂಭವಿಸಿವೆ. ಮೊದಲ ಚಂದ್ರಗ್ರಹಣವು ಜನವರಿ 10ರಂದು, ಎರಡನೇ ಚಂದ್ರಗ್ರಹಣವು ಜೂನ್ 5ರಂದುಯ ಮತ್ತು ಮೂರನೇ ಚಂದ್ರಗ್ರಹಣವು ಜುಲೈ 5ರಂದು ಸಂಭವಿಸಿತ್ತು. ನಾಲ್ಕನೇ ಚಂದ್ರಗ್ರಹಣವು ಇಂದು ಅಂದರೆ ಶುಕ್ಲ ಪಕ್ಷದ ಕಾರ್ತಿಕ ಪೂರ್ಣಿಮಾ ದಿನದಂದು ಸಂಭವಿಸಲಿದೆ.
ಮುಂದಿನ ಚಂದ್ರಗ್ರಹಣವು 2022ರ ಮೇ 26ರ ಬುಧವಾರ ಸಂಭವಿಸಲಿದೆ ಎಂದು ಖಗೋಳ ತಜ್ಞರು ತಿಳಿಸಿದ್ದಾರೆ.
ಈ ವರ್ಷ ಒಟ್ಟು 6 ಗ್ರಹಣಗಳು ಸಂಭವಿಸುತ್ತವೆಂದು ಅಂದಾಜಿಸಲಾಗಿತ್ತು. ಅದರಲ್ಲಿ ನಾಲ್ಕು ಚಂದ್ರಗ್ರಹಣಗಳಾದರೆ, ಇನ್ನು ಎರಡು ಸೂರ್ಯಗ್ರಹಣಗಳು. ಈಗಾಗಲೇ ನಾಲ್ಕು ಗ್ರಹಣಗಳು ಜನವರಿ, ಜೂನ್ ಮತ್ತು ಜುಲೈ ತಿಂಗಳಲ್ಲಿ ಸಂಭವಿಸಿವೆ. ಇಂದು ನಾಲ್ಕನೇ ಚಂದ್ರಗ್ರಹಣ ಸಂಭವಿಸಲಿದ್ದು, ಇನ್ನು ಮುಂಬರುವ ಡಿಸೆಂಬರ್ ತಿಂಗಳಲ್ಲಿ ಈ ವರ್ಷದ ಕೊನೆಯ ಸೂರ್ಯ ಗ್ರಹಣ ಸಂಭವಿಸಲಿದೆ ಎಂದು ತಿಳಿದು ಬಂದಿದೆ.