ನವದೆಹಲಿ : ಹಲವು ಬ್ಯಾಂಕುಗಳ ಮಾದರಿಯಲ್ಲಿ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿಯೂ ಇನ್ನು ಮುಂದೆ ಕನಿಷ್ಠ ಬ್ಯಾಲೆನ್ಸ್ ಇರಲೇಬೇಕು. ಭಾರತೀಯ ಅಂಚೆ ಇಲಾಖೆ ಈ ಕುರಿತು ಮಾಹಿತಿ ನೀಡಿದೆ.
ಇನ್ನು ಮುಂದೆ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿಯೂ 500 ರೂ. ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು ಎಂದು ಅಂಚೆ ಇಲಾಖೆ ಟ್ವೀಟ್‌ನಲ್ಲಿ ತಿಳಿಸಿದೆ.
ಕನಿಷ್ಠ ಮೊತ್ತವನ್ನು 500 ರೂ. ನಿಗದಿ ಮಾಡಲಾಗಿದೆ. ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರುವ ಎಲ್ಲಾ ಜನರು ಡಿಸೆಂಬರ್ 11ರೊಳಗೆ ತಮ್ಮ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ಕೊಡಲಾಗಿದೆ.
ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ಖಾತೆಯ ನಿರ್ವಹಣೆ ಸಮಯದಲ್ಲಿ ಹಣವನ್ನು ಕಡಿತ ಮಾಡಲಾಗುತ್ತದೆ ಎಂದು ಅಂಚೆ ಇಲಾಖೆ ಹೇಳಿದೆ. ಇಷ್ಟು ದಿನ ಅಂಚೆ ಇಲಾಖೆ ಕನಿಷ್ಠ ಬ್ಯಾಲೆನ್ಸ್ ಇರಬೇಕು ಎಂಬ ನಿಯಮ ಜಾರಿಗೊಳಿಸಿರಲಿಲ್ಲ.
ವಿತ್ತೀಯ ವರ್ಷದ ಅಂತ್ಯದಲ್ಲಿ ಜನರು ತಮ್ಮ ಉಳಿತಾಯ ಖಾತೆಯಲ್ಲಿ 500 ರೂ. ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ನಿರ್ವಹಣಾ ವೆಚ್ಚದ ರೂಪದಲ್ಲಿ 100 ರೂ.ಗಳನ್ನು ಕಡಿತ ಮಾಡಲಾಗುತ್ತದೆ ಎಂದು ಅಂಚೆ ಇಲಾಖೆ ಹೇಳಿದೆ. ತಿಂಗಳ ದಿನಾಂಕ 10 ರಿಂದ ಕೊನೆಯ ತನಕದ ಅವಧಿಯಲ್ಲಿ ಖಾತೆಯಲ್ಲಿ 500 ರೂ.ಗಳಿಗಿಂತ ಕಡಿಮೆ ಮೊತ್ತವಿದ್ದರೆ ತಿಂಗಳ ಬಡ್ಡಿ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.