ಬೆಂಗಳೂರು: ಬೆಂಗಳೂರಿನ ಮಣಿಪಾಲ್ ಸೆಂಟರ್‌ನಲ್ಲಿರುವ ಮುಳಿಯ ಜ್ಯುವೆಲ್ಸ್ ಮಳಿಗೆಯಲ್ಲಿ ನಡೆದ ʼಬೆಳೆಸೋಣ ನಮ್ಮತನ- ಕನ್ನಡದ ಭಾವ ಬದುಕುʼ ಕಾರ್ಯಕ್ರಮ ನಡೆಯಿತು. ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅರುಣ ಶ್ಯಾಮ್ ಎನ್. ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಮಾತಾನಾಡಿ ‘ಕನ್ನಡದ ನಮ್ಮತನವನ್ನು ಕಾಪಾಡಿಕೊಳ್ಳಲು ನಮ್ಮ ಪ್ರಾದೇಶಿಕ ವಿಶಿಷ್ಟ ಪ್ರಾದೇಶಿಕ ಉತ್ಪಾದಿತ ವಸ್ತುಗಳ ಗುರುತಿಸುವ ಕೆಲಸ ಆಗಬೇಕು ಎಂದು ಚಿಂತನ ಮಂಥನದಲ್ಲಿ ಅವರು ಮಾತನಾಡಿದರು. ‘ಗುಲಾಮಗಿರಿಯಲ್ಲಿ ಬೆಳೆದು ಬಂದ ಮನಸ್ಥಿತಿಯಿಂದಾಗಿ ಕನ್ನಡದ ಬಗ್ಗೆ ನಮ್ಮಲ್ಲೇ ಕೀಳರಿಮೆ ಇದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಆಗಬೇಕಾದರೆ ಒಂದು ಆಂದೋಲನವೇ ಆಗಬೇಕು. ಅದಕ್ಕಾಗಿ ಪ್ರಾಧಿಕಾರವೂ ಬದ್ಧವಾಗಿದೆ.
ಕನ್ನಡೇತರರಿಗೆ ಕನ್ನಡ ಕಲಿಸುವ ಸಲುವಾಗಿ ಕನ್ನಡ ಕಲಿಕೆ-ನಿರಂತರ ಕನ್ನಡ ಬಳಕೆ- ನಿರಂತರ ಕನ್ನಡ ಕಾಯಕ ಎಂಬ ಪರಿಕಲ್ಪನೆಯನ್ನು ನ. ೧ರಿಂದ ಅನುಷ್ಠಾನಕ್ಕೆ ತಂದಿದ್ದೇವೆ. ಇದರ ಮೂಲಕ ಭಾಷಾ ಕಲಿಕೆಯ ಕೈಪಿಡಿಗಳನ್ನು ಅಂಗಡಿ, ಮಳಿಗೆಗಳಿಗೆ, ಟ್ಯಾಕ್ಸಿ ಚಾಲಕರಿಗೆ ವಿತರಿಸಲಾಗುವುದು. ಬರುವ ಗ್ರಾಹಕರು ಕನ್ನಡದಲ್ಲೇ ಸಂವಹನ ನಡೆಸಲು ಅಗತ್ಯವಿದ್ದಷ್ಟು ಅನುವಾದಿತ ವಾಕ್ಯಗಳು ಆ ಕೈಪಿಡಿಯಲ್ಲಿರುತ್ತವೆ’ ಎಂದರು. ‘ಭಾಷೆ ಬೆಳೆಸಲು ಭಾವನಾತ್ಮಕ ಹೋರಾಟದ ಜೊತೆಗೆ ಕಾನೂನಿನ ಬೆಂಬಲವೂ ಬೇಕು. ನಾವು ಈ ನಿಟ್ಟಿನಲ್ಲಿ ಸ್ವಲ್ಪ ಹಿಂದೆ ಉಳಿದಿದ್ದೇವೆ. ರಾಷ್ಟ್ರಮಟ್ಟದಲ್ಲಿ ಜಾರಿಯಾಗುವ ಕಾನೂನುಗಳನ್ನು ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಿ ಎಂದಾಗ ಹಿಂದಿ ಇಂಗ್ಲಿಷ್ ಎರಡು ಭಾಷೆಯಲ್ಲಿ ಮಾತ್ರ ಸಾಧ್ಯ ಎಂದು ಕೇಂದ್ರ ಸರ್ಕಾರ ಹೇಳಿತು. ಈ ವಾದವನ್ನು ಕೇಳಿದ ನ್ಯಾಯಾಲಯವೂ ಕೂಡಾ ಸುಮ್ಮನಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಕನ್ನಡ ಬೆಳೆಸುವ ಇಂಥ ಕಾರ್ಯಕ್ರಮವನ್ನು ಮುಳಿಯ ಪ್ರತಿಷ್ಠಾನ ಮಾಡುತ್ತಿರುವುದು ವಿಶೇಷ. ಈ ಬೀಜ ಕನ್ನಡ ಕಟ್ಟುವಲ್ಲಿ ಹೆಮ್ಮರವಾಗಿ ಬೆಳೆಯಲಿ’ ಎಂದು ಹೇಳಿದರು. ಇನ್ನು ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು.