ಕಾನ್ಸ್‍ಟೇಬಲ್‍ಗಳ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳು : ಪ್ರಮುಖ ಆರೋಪಿಗಾಗಿ ವ್ಯಾಪಕ ಶೋಧ – ಕಹಳೆ ನ್ಯೂಸ್
ಬೆಂಗಳೂರು – ಪೊಲೀಸ್ ಕಾನ್ಸ್‍ಟೆಬಲ್‍ಗಳ ಹುದ್ದೆಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ಅಸಲಿ ಅಭ್ಯರ್ಥಿಗಳ ಬದಲಿಗೆ ನಕಲಿ ಅಭ್ಯರ್ಥಿಗಳನ್ನು ರೂಪಿಸಿ ಬರೆಸುತ್ತಿದ್ದ ಪ್ರಮುಖ ಆರೋಪಿ ಯಾರು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ತಲೆಮರೆಸಿಕೊಂಡಿರುವ ಈ ಪ್ರಕರಣದ ಕಿಂಗ್‍ಪಿನ್‍ಗಾಗಿ ಬೆಂಗಳೂರು ಹಾಗೂ ಬೆಳಗಾವಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಈ ಕಿಂಗ್‍ಪಿನ್ ಈ ಹಿಂದೆ ಕಬ್ಬಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಬಿಟ್ಟ ನಂತರ ಹಲವಾರು ದಂಧೆ ಮಾಡಿಕೊಂಡು ವಿಲಾಸಿ ಜೀವನ ನಡೆಸುತ್ತಿದ್ದನೆಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ನನಗೆ ಬಹಳಷ್ಟು ರಾಜಕಾರಣಿಗಳ ಪರಿಚಯವಿದೆ. ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಅಮಾಯಕ ಯುವಕರಿಂದ ಹಣ ಸಹ ಪಡೆದುಕೊಂಡಿದ್ದಾನೆ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಈ ಪ್ರಮುಖ ಆರೋಪಿ ಅಮಾಯಕ ಹಾಗೂ ಬುದ್ಧಿವಂತ ಬಡ ಯುವಕರನ್ನು ಪತ್ತೆಹಚ್ಚಿ ಅವರುಗಳನ್ನು ಪ್ರೇರೇಪಿಸಿ ಅಸಲಿ ಅಭ್ಯರ್ಥಿಗಳ ಬದಲಿಗೆ ಪರೀಕ್ಷೆ ಬರೆಸುತ್ತಿದ್ದ ಎಂಬುದು ಗೊತ್ತಾಗಿದೆ. ಕಳೆದ 22ರಂದು ಪೊಲೀಸ್ ಕಾನ್ಸ್‍ಟೆಬಲ್‍ಗಳ ಹುದ್ದೆಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ಅಸಲಿ ಅಭ್ಯರ್ಥಿಗಳ ಬದಲಿಗೆ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಂಗಳೂರು ನಗರದಲ್ಲಿ 5 ಮಂದಿ ಹಾಗೂ ಬೆಳಗಾವಿಯಲ್ಲಿ 4 ಮಂದಿ ನಕಲಿ ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ.