Friday, September 20, 2024
ಸುದ್ದಿ

ಮಾ. 25ರಿಂದ ಅಂತಾರಾಜ್ಯ ಮುಕ್ತ ಭಜನ ಸಂಭ್ರಮ ; ಆರು ದಿನಗಳ ಭಜನ ಸ್ಪರ್ಧೆ – 73 ತಂಡಗಳು ಭಾಗಿ – ಕಹಳೆ ನ್ಯೂಸ್

????????????????????????????????????

ಈಶ್ವರಮಂಗಲ: ಭಜನೆ ಒಂದು ಸಾಂಪ್ರದಾಯಿಕ ಮತ್ತು ಸಾಮೂಹಿಕ ಆರಾಧನಾ ಕ್ರಮ. ಭಕ್ತಿ ಮಾರ್ಗದಲ್ಲಿ ಭಜನೆ ಅಗ್ರ ಸ್ಥಾನದಲ್ಲಿದೆ. ಭಜನೆಯಿಂದ ಮನಸ್ಸು ಶೀಘ್ರವಾಗಿ ಭಗವಂತನಲ್ಲಿ ಲೀನವಾಗುತ್ತದೆ. ಏಕಾಗ್ರತೆಯನ್ನು ಹೆಚ್ಚಿಸಿ, ಭಕ್ತಿ-ಭಾವವನ್ನು ಬೆಳೆಸಿ ಮನಸ್ಸನ್ನು ನಿರ್ಮಲಗೊಳಿಸುತ್ತದೆ.

ಸಂಗೀತ ಎಲ್ಲ ಲಲಿತಕಲೆಗಳಲ್ಲಿ ಶ್ರೇಷ್ಠವಾದುದು. ಇದು ಶ್ರವಣವಿದ್ಯೆಯಾದ ಕಾರಣ ಮನಸ್ಸಿಗೆ ಮುದ ನೀಡುತ್ತದೆ. ಸಂಗೀತದ ಮೂಲಕ ದೇವರ ನಾಮಸ್ಮರಣೆ ಮಾಡುವುದೇ ಭಜನೆ. ಸಾಂಪ್ರದಾಯಿಕ ಭಜನ ಕಲೆಯನ್ನು ಪ್ರೋತ್ಸಾಹಿಸಿ, ಭಜನೆಯ ಮಹತ್ವವನ್ನು ಪ್ರಚುರಪಡಿಸುವ ಪ್ರಯತ್ನವಾಗಿ ಹನುಮಗಿರಿ ಕ್ಷೇತ್ರದಲ್ಲಿ ಮಾ. 25ರ ರಾಮನವಮಿಯಂದು ಪ್ರಾರಂಭಿಸಿ ಮಾ. 30ರ ಹನುಮ ಜಯಂತಿವರೆಗೆ ಆರು ದಿನಗಳ ಕಾಲ ಅಂತಾರಾಜ್ಯ ಭಜನ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಸಂಜೆ ಆಗುತ್ತಿದ್ದಂತೆಯೇ ಮನೆಗಳಲ್ಲಿ ದೇವರಿಗೆ ದೀಪ ಬೆಳಗಿ ಭಜನೆ ಹಾಡುವ ಸಂಪ್ರದಾಯ ಕಡಿಮೆಯಾಗುತ್ತಿದೆ. ಮಂದಿರ, ಮನೆಗಳಲ್ಲಿ ಸೇರಿ ಸಾಮೂಹಿಕವಾಗಿ ಭಜನೆ ಹಾಡಿ, ದೇವರ ಅನುಗ್ರಹಕ್ಕೆ ಪಾತ್ರರಾಗುವ ನಿದರ್ಶನಗಳು ಅಲ್ಲಲ್ಲಿ ಇವೆ. ಈ ನಿಟ್ಟಿನಲ್ಲಿ ಭಜನ ಸ್ಪರ್ಧೆಯಿಂದ ಕಲಾವಿದರ ಹುರುಪು ಹೆಚ್ಚಲಿದೆ.

ವಿಜೇತರಿಗೆ ನಗದು ಪುರಸ್ಕಾರ
ಅಂತಾರಾಜ್ಯ ಭಜನ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ., ತೃತೀಯ ಮತ್ತು ಚತುರ್ಥ ತಲಾ 5000 ರೂ. ನಗದು ಪುರಸ್ಕಾರ ಪ್ರದಾನ ಮಾಡಲಾಗುವುದು. ರಾಜ್ಯ ಹಾಗೂ ಹೊರ ರಾಜ್ಯಗಳ 73 ಭಜನ ತಂಡಗಳು ಹೆಸರು ನೋಂದಾಯಿಸಿವೆ. ಮಾ. 25ರಿಂದ ಮಾ. 30ರ ವರೆಗೆ ಅರ್ಹತೆ ಸುತ್ತುಗಳಿದ್ದು, ಹನುಮ ಜಯಂತಿಯಂದು ಅರ್ಹತೆ ಪಡೆದ ನಾಲ್ಕು ತಂಡಗಳ ಮಧ್ಯೆ ಪ್ರಥಮ ಬಹುಮಾನಕ್ಕಾಗಿ ಸೆಣಸಾಟ ನಡೆಯಲಿದೆ.

ನಿಯಮಗಳು
ಭಜನ ತಂಡಕ್ಕೆ ಪ್ರವೇಶ ಶುಲ್ಕವಿರುವುದಿಲ್ಲ. ತಂಡದಲ್ಲಿ 12 ಜನ ಇರಬಹುದಾಗಿದ್ದು, ವೇದಿಕೆಯಲ್ಲಿ ಗರಿಷ್ಠ 9 ಜನರಿಗೆ ಭಜನೆ ಹೇಳಲು ಅವಕಾಶವಿರುತ್ತದೆ. 45 ನಿಮಿಷಗಳ ಅವಧಿಯಲ್ಲಿ ಆರು ಭಜನೆ ಹಾಡಬೇಕು. ಶ್ರೀರಾಮ ಹಾಗೂ ಆಂಜನೇಯನ ಮೇಲೆ ಕನಿಷ್ಠ ಒಂದೊಂದು ಭಜನೆಯನ್ನು ಹಾಡಬೇಕಾಗುತ್ತದೆ. ತಾಳ-ತಂಬೂರಿಯ ಹೊರತಾಗಿ ಗರಿಷ್ಠ ಮೂರು ಪರಿಕರಗಳನ್ನು ಬಳಸಬಹುದು. ಒಬ್ಬ ಭಜಕ ಗರಿಷ್ಠ 2 ಭಜನೆ ಹಾಡಲು ಅವಕಾಶವಿದೆ. ತಂಡಗಳಿಗೆ ಸಾಂಕೇತಿಕ ಹೆಸರನ್ನು ನೀಡಲಾಗುವುದು. ಕೊನೆಯ ತನಕ ಗೌಪ್ಯ ಕಾಯ್ದುಕೊಳ್ಳಬೇಕು. ಭಾಷೆಗೆ ನಿರ್ಬಂಧವಿಲ್ಲ. ನೃತ್ಯ ಭಜನೆಗೆ ಅವಕಾಶವಿಲ್ಲ.

ರೋಚಕ ಸ್ಪರ್ಧೆ
ಅಂತಾರಾಜ್ಯ ಮುಕ್ತ ಭಜನ ಸ್ಪರ್ಧೆ ನಡೆಯುತ್ತಿರುವುದು ರಾಜ್ಯದಲ್ಲಿ ಪ್ರಥಮವಾಗಿದೆ. ಉತ್ತಮ ರೀತಿಯ ಸ್ಪಂದನೆ ಸಿಕ್ಕಿದೆ. ರಾಜ್ಯ ಮತ್ತು ಹೊರರಾಜ್ಯಗಳ 73 ತಂಡಗಳು ಹೆಸರನ್ನು ನೋಂದಾಯಿಸಿವೆ. ಈ ತಂಡಗಳಿಗೆ ಸ್ಪರ್ಧೆಯ ದಿನಾಂಕವನ್ನು ನೀಡಲಾಗಿದೆ. ಅರ್ಹತೆ ಹಾಗೂ ಅಂತಿಮ ಹಣಾವಣಿಯ ಸ್ಪರ್ಧೆ ಭಜನ ಪ್ರಿಯರಲ್ಲಿ ರೋಚಕತೆಯನ್ನು ಹೆಚ್ಚಿಸಲಿದೆ.
–  ಸುಖೇಶ್‌ ರೈ ಕುತ್ಯಾಳ,
ಸಂಯೋಜಕರು