ಲಾಕ್ಅಪ್ ಡೆತ್ ತಡೆಗೆ ಸಿಸಿಟಿವಿ ಅಳವಡಿಸಿದ್ದನ್ನು ಖಾತರಿಪಡಿಸಿ – ಕೇಂದ್ರಕ್ಕೆ ಸುಪ್ರೀಂ ಸೂಚನೆ – ಕಹಳೆ ನ್ಯೂಸ್
ನವದೆಹಲಿ: ಎಲ್ಲ ವಿಚಾರಣಾ ಕೊಠಡಿಗಳು ಮತ್ತು ಲಾಕ್ಅಪ್ಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಆಡಿಯೋ ರೆಕಾರ್ಡರ್ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಇದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನೀಡಿದ ಐತಿಹಾಸಿಕ ತೀರ್ಪು ಒಂದರಲ್ಲಿ ಸೂಚಿಸಿದೆ. ಸುಪ್ರೀಂ ಕೋರ್ಟ್ನ ಈ ಆದೇಶವು ಪೊಲೀಸರಿಗಷ್ಟೇ ಅಲ್ಲ ಸಿಬಿಐ, ಇಡಿ, ಎನ್ಐಎಗೂ ಅನ್ವಯವಾಗುತ್ತದೆ. ಲಾಕ್ಅಪ್ ಡೆತ್ ಕೇಸ್ಗಳು, ಚಿತ್ರಹಿಂಸೆ ಪ್ರಕರಣಗಳನ್ನು ತಡೆಯುವ ದೃಷ್ಟಿಯಿಂದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ 2018ರಲ್ಲೇ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ನ್ಯಾಯಮೂರ್ತಿಗಳಾದ ಆರ್ಎಫ್ ನಾರಿಮನ್, ಕೆ.ಎಂ.ಜೋಸೆಫ್, ಅನಿರುದ್ಧಾ ಬೋಸ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಸೂಚನೆ ನೀಡಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲೂ ಸಿಸಿಟಿವಿ ಕ್ಯಾಮೆರಾ, ಆಡಿಯೋ ರೆಕಾರ್ಡರ್ ಅಳವಡಿಸಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಸಿಸಿಟಿವಿ ಕ್ಯಾಮೆರಾಗಳು ಪೊಲೀಸ್ ಠಾಣೆಯ ಪ್ರವೇಶ ಮತ್ತು ನಿರ್ಗಮನ, ಮುಖ್ಯದ್ವಾರ, ಲಾಕ್ಅಪ್, ಕಾರಿಡಾರ್, ಲಾಬಿ, ರಿಸೆಪ್ಶನ್, ಲಾಕ್ಅಪ್ ಹೊರಭಾಗದಲ್ಲೂ ಅಳವಡಿಸಿರಬೇಕು. ಯಾವುದೇ ಪ್ರದೇಶ ಸಿಸಿಟಿವಿ ಕ್ಯಾಮೆರಾದಿಂದ ಮರೆಯಾಗಿದೆ ಎನ್ನುವ ನೆಪ ಬಾರದಂತೆ ಖಾತರಿಪಡಿಸಿಕೊಳ್ಳಬೇಕು ಎಂದು ತೀರ್ಪು ಸೂಚಿಸಿದೆ.
ಮಂಗಳವಾರದ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ, ನೈಟ್ ವಿಷನ್ ಮತ್ತು ಆಡಿಯೋ ಮುದ್ರಿಸಿಕೊಳ್ಳುವ ಸೌಲಭ್ಯವಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರಬೇಕು. ಅವು ದೃಶ್ಯ ಮತ್ತು ಧ್ವನಿಯನ್ನು ಸ್ಪಷ್ಟವಾಗಿ ದಾಖಲಿಸಿಕೊಳ್ಳುವಂತೆ ಇರಬೇಕು. ಅಂತಹ ಸಿಸಿಟಿವಿ ವ್ಯವಸ್ಥೆಯನ್ನು ಖರೀದಿಸುವುದನ್ನು ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತ ಕಡ್ಡಾಯಗೊಳಿಸಬೇಕು. ಈ ರೀತಿ ಚಿತ್ರೀಕೃತವಾದ ದೃಶ್ಯಗಳನ್ನು ಗರಿಷ್ಠ ಅವಧಿಗೆ ಸಾಧ್ಯವಾಗದೇ ಹೋದರೆ ಕನಿಷ್ಠ ಒಂದು ವರ್ಷವಾದರೂ ಜಾಗರೂಕತೆಯಿಂದ ಉಳಿಸಿಕೊಳ್ಳಬೇಕು ಎಂದು ಹೇಳಿತ್ತು.
ಇದಲ್ಲದೆ, ಬಂಧಿಸುವ ಮತ್ತು ವಿಚಾರಣೆ ನಡೆಸುವ ಅಧಿಕಾರ ಉಳ್ಳ ಸಿಬಿಐ, ಎನ್ಐಎ, ಇಡಿ, ಎನ್ಸಿಬಿ, ಡಿಆರ್ಐ, ಎಸ್ಎಫ್ಐಒ ಮತ್ತು ಇತರೆ ತನಿಖಾ ಸಂಸ್ಥೆಗಳಿಗೂ ಇದು ಅನ್ವಯವಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿರುವ ನ್ಯಾಯಪೀಠ, ಇವುಗಳ ಉಸ್ತುವಾರಿಗೆ ಸಮಿತಿ ರಚಿಸುವಂತೆ ಸೂಚಿಸಿತ್ತು. ರಾಜ್ಯ ಮಟ್ಟದ ಉಸ್ತುವಾರಿ ಸಮಿತಿ, ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಗಳನ್ನು ರಚಿಸಿ ನಿಗಾವಹಿಸಬೇಕು ಎಂದಿದೆ.