ಮಂಗಳೂರು : ಮಂಗಳೂರು-ಶ್ರವಣಬೆಳಗೊಳ-ಬೆಂಗಳೂರು ರೈಲು ಸೇವೆ ಪುನಃ ಆರಂಭವಾಗುತ್ತಿದೆ. ಕೋವಿಡ್ ಕಾರಣದಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಕರಾವಳಿ ಭಾಗದ ಪ್ರಯಾಣಿಕರಿಗೆ ತೊಂದರೆ ಉಂಟಾಗಿತ್ತು.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಈ ಕುರಿತು ಮಾಹಿತಿ ನೀಡಿದ್ದಾರೆ. “ವಾರದಲ್ಲಿ ನಾಲ್ಕು ದಿನಗಳ ಕಾಲ ರೈಲು ಸಂಚಾರ ನಡೆಸಲಿದ್ದು, ಜನರು ಇದರ ಉಪಯೋಗ ಪಡೆದುಕೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ. ಸಂಸದರು ಕೇಂದ್ರ ರೈಲ್ವೆ ಸಚಿವರು, ರೈಲ್ವೆ ಇಲಾಖೆಯ ಜೊತೆ ಮಾತುಕತೆ ನಡೆಸಿದ್ದು, ರೈಲು ಸಂಚಾರವನ್ನು ಪುನಃ ಆರಂಭಿಸಲು ಒಪ್ಪಿಗೆ ನೀಡಲಾಗಿದೆ. ರೈಲು ಸಂಚಾರ ಆರಂಭದ ದಿನಾಂಕ ಅಂತಿಮಗೊಳ್ಳಬೇಕಿದೆ.
ರಾಜಧಾನಿ ಬೆಂಗಳೂರಿನಿಂದ ಹೊರಡುವ ರೈಲು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಮೂಲಕ ಮಂಗಳೂರನ್ನು ತಲುಪಲಿದೆ. ಈ ರೈಲಿನಿಂದಾಗಿ ಕರಾವಳಿ ಮತ್ತು ಬೆಂಗಳೂರು ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ. ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ಭಾರತೀಯ ರೈಲ್ವೆ ಎಲ್ಲಾ ರೈಲುಗಳ ಸಂಚಾರವನ್ನು ರದ್ದುಗೊಳಿಸಿತ್ತು. ಮೇ ತಿಂಗಳ ಬಳಿಕ ಹೆಚ್ಚು ಬೇಡಿಕೆ ಇರುವ ಮಾರ್ಗದಲ್ಲಿ ಮಾತ್ರ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ದೀಪಾವಳಿ ಮತ್ತು ದಸರಾ ಅಂಗವಾಗಿ ಹಲವು ಹಬ್ಬದ ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಿದೆ. ಈ ರೈಲುಗಳ ಸೇವೆಯನ್ನು ಡಿಸೆಂಬರ್ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಸಾಮಾನ್ಯ ರೈಲುಗಳ ಸಂಚಾರ ಯಾವಾಗ ಆರಂಭವಾಗಲಿದೆ ಎಂಬುದು ಅಂತಿಮವಾಗಿಲ್ಲ.