ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡ ಸಂಘಟನೆಗಳು ಶನಿವಾರ ಬಂದ್ ಆಚರಿಸಲಿದ್ದು, ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು ಬೆಂಬಲ ನೀಡಿವೆ. ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಭಾರೀ ಬಂದೋ ಬಸ್ತ್ ಏರ್ಪಡಿಸಲಾಗಿದೆ.
ಕನ್ನಡ ಸಂಘಟನೆಗಳು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ, ತಹಶೀಲ್ದಾರ್ ಕಚೇರಿಗಳಿಗೆ ಮುತ್ತಿಗೆ ಹಾಕಲಿವೆ. ಜತೆಗೆ ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಿ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲು ಸಂಘಟನೆಗಳು ಸಜ್ಜಾಗಿವೆ.
ಬಿಗಿ ಬಂದೋ ಬಸ್ತ್
ಬೆಂಗಳೂರು ಸೇರಿ ರಾಜ್ಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳುವಂತೆ ಡಿಜಿಪಿ ಪ್ರವೀಣ್ ಸೂದ್ ವಲಯ ಐಜಿಪಿಗಳಿಗೆ, ಎಸ್‌ಪಿಗಳಿಗೆ, ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ. ಭದ್ರತೆ ಹೊಣೆಯನ್ನು ಆಯಾ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ವಹಿಸಲಾಗಿದೆ.
ಕಠಿನ ಕ್ರಮದ ಎಚ್ಚರಿಕೆ
ಬಂದ್‌ಗೆ ಕರೆ ನೀಡಿರುವ ಕನ್ನಡ ಸಂಘ ಟನೆಗಳು ಇದುವರೆಗೂ ಪೊಲೀಸರ ಅನುಮತಿ ಕೇಳಿಲ್ಲ. ಆದಾಗ್ಯೂ ಸಾರ್ವಜನಿಕರಿಗೆ ತೊಂದರೆ ಕೊಡುವುದು, ಅನಗತ್ಯ ಶಾಂತಿ ಭಂಗ ಉಂಟು ಮಾಡಿದರೆ, ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿ ಮೂಲಗಳು ತಿಳಿಸಿವೆ.
ಸಂಘಟನೆಗಳ ಬೆಂಬಲ
ಒಲಾ, ಊಬರ್ ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಕರ್ನಾಟಕ ರಕ್ಷಣ ವೇದಿಕೆಯ ನಾರಾಯಣ ಗೌಡ ಬಣ ಸಹಿತ ಹಲವು ಕನ್ನಡ ಪರ ಸಂಘಟನೆಗಳು ಬಂದ್‌ನಲ್ಲಿ ಪಾಲ್ಗೊಳ್ಳಲಿವೆ. ಈಗಾಗಲೇ ವಿವಿಧ ಸಂಘಟನೆಗಳಿಗೆ ಬಂದ್‌ನಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ.
ಏನಿರುತ್ತವೆ?
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್, ನಮ್ಮ ಮೆಟ್ರೋ, ಆಸ್ಪತ್ರೆಗಳು, ಮೆಡಿಕಲ್ ಶಾಪ್, ಸರಕಾರಿ ಕಚೇರಿಗಳು, ಆಯಂಬುಲೆನ್ಸ್ ಸೇವೆ, ಹಾಲು, ಪೇಪರ್, ವಿಮಾನ, ರೈಲು ಸೇವೆ, ಬ್ಯಾಂಕ್ ಸೇವೆ, ಹೊಟೇಲ್, ಬಟ್ಟೆ ಅಂಗಡಿ, ಕೃಷಿ ಮಾರುಕಟ್ಟೆ, ತರಕಾರಿ, ಹೂ-ಹಣ್ಣು.
ಏನಿರುವುದಿಲ್ಲ ?
ಏರ್ ಪೋರ್ಟ್ ಟ್ಯಾಕ್ಸಿ, ಓಲಾ, ಊಬರ್ ಟ್ಯಾಕ್ಸಿ ಸಂಚಾರ, ಲಾರಿ,ಗೂಡ್ಸ್ ವಾಹನ ಸಂಚಾರ (ಪರಿಸ್ಥಿತಿ ನೋಡಿಕೊಂಡು ತೀರ್ಮಾನ)
ಕರಾವಳಿ ಬಂದ್ ಸಾಧ್ಯತೆ ಕಡಿಮೆ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಗಳಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆಯಾದರೂ ಬಂದ್‌ಗೆ ಕರೆ ನೀಡಿಲ್ಲವಾದ್ದ ರಿಂದ ಶನಿವಾರದ ರಾಜ್ಯ ಬಂದ್ ಕರೆ ಕರಾವಳಿಯ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎನ್ನಲಾಗಿದೆ.