ಮಂಗಳೂರು : ಯಕ್ಷಗಾನ ಹಿಮ್ಮೇಳವಾದಕ ಕಡಬ ನಾರಾಯಣ ಆಚಾರ್ಯ ಮತ್ತು ಅವರ ಪುತ್ರ ಕಡಬ ವಿನಯ ಆಚಾರ್ಯ ನೆನಪಿನಲ್ಲಿ ‘ಕಡಬ ಸಂಸ್ಮರಣಾ ಸಮಿತಿ’ ನೀಡುವ ‘ಕಡಬ ಸಂಸ್ಮರಣಾ ಪ್ರಶಸ್ತಿ-2020’ನ್ನು ದಿ.ನಾರಾಯಣ ಆಚಾರ್ಯ ಅವರ ಗುರುಗಳಾದ ಹಿರಿಯ ಮದ್ದಳೆಗಾರ ಹರಿನಾರಾಯಣ ಬೈಪಡಿತ್ತಾಯ ಅವರಿಗೆ ಪ್ರದಾನ ಮಾಡಲಾಯಿತು.
ನಗರದ ಖಾಸಗಿ ಸುದ್ದಿವಾಹಿನಿಯ ಸ್ಟುಡಿಯೊದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಬೈಪಡಿತ್ತಾಯ ದಂಪತಿಯನ್ನು ಸನ್ಮಾನಿಸಲಾಯಿತು. ಅತಿಥಿಯಾಗಿದ್ದ ಮೂಳೆ ತಜ್ಞ ಡಾ. ಭಾಸ್ಕರಾನಂದ ಕುಮಾರ್ ಮಾತನಾಡಿ, ಕಡಬ ನಾರಾಯಣ ಆಚಾರ್ಯ ತಮ್ಮ ಮದ್ದಳೆ ವಾದನ ಮೂಲಕ ಯಕ್ಷಗಾನೀಯ ವಾತಾವರಣ ಸೃಷ್ಟಿಸುತ್ತಿದ್ದರು. ಮದ್ದಳೆ ವಾದನದಲ್ಲಿ ಪ್ರಾವೀಣ್ಯತೆ ಹೊಂದಿದ್ದರು ಎಂದರು. ಸಂಸ್ಮರಣಾ ಭಾಷಣ ಮಾಡಿದ ಹಿರಿಯ ಕಲಾವಿದ ಎಂ.ಕೆ. ರಮೇಶ ಆಚಾರ್ಯ, ಕಡಬ ನಾರಾಯಣ ಆಚಾರ್ಯ ಮದ್ದಳೆಯಲ್ಲಿ ತಪಸ್ಸು ಮಾಡಿದ ಸಾಧಕ. ಅವಿಶ್ರಾಂತ ಪರಿಶ್ರಮದಿಂದ ಸಿದ್ದಿಯಾದ ಪ್ರಸಿದ್ಧಿ ಅವರಿಗೆ ಬಂದಿತ್ತು. ಸುರತ್ಕಲ್ ಮೇಳದಲ್ಲಿ ಸುದೀರ್ಘ ಒಡನಾಟ ಹೊಂದಿದ್ದ ಸಜ್ಜನ ಕಲಾವಿದ ಎಂದರು.
ಸಂಸ್ಮರಣಾ ಭಾಷಣ ಮಾಡಿದ ಮದ್ದಳೆವಾದಕ ಕೃಷ್ಣ ಪ್ರಕಾಶ ಉಳಿತ್ತಾಯ, ಕಡಬ ವಿನಯ ಆಚಾರ್ಯ ಎಳೆಯ ಪ್ರಾಯದಲ್ಲೇ ‘ಎ’ ಗ್ರೇಡ್ ಕಲಾವಿದರಾಗಿ ರೂಪುಗೊಂಡಿದ್ದರು. ಸಹ ಕಲಾವಿದರ ಬಗ್ಗೆ ಯಾವುದೇ ಮತ್ಸರ ಹೊಂದದೇ, ಮದ್ದಳೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ ದ್ದರು. ಸಣ್ಣ ವಯಸ್ಸಿನಲ್ಲೇ ಅವರು ಅಗಲಿರುವುದು ದುರ್ದೈವ. ಕಡಬ ಪರಂಪರೆಯನ್ನು ಪಠ್ಯರೂಪದಲ್ಲಿ ಉಳಿಸುವ ಕಾರ್ಯ ಆಗಬೇಕು ಎಂದರು. ಅಭಿನಂದನಾ ಭಾಷಣ ಮಾಡಿದ ಕಲಾವಿದ ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ, ಕಡಬ ನಾರಾಯಣ ಆಚಾರ್ಯ ಅವರ ಗುರುಗಳಾದ ಹರಿನಾರಾಯಣ ಬೈಪಡಿತ್ತಾಯ ಅವರಿಗೆ ಕಡಬ ನೆನಪಿನ ಮೊದಲ ಪ್ರಶಸ್ತಿ ಅರ್ಹವಾಗಿಯೇ ಸಂದಿದೆ ಎಂದರು.
ಹಿರಿಯ ಭಾಗವತ ಪದ್ಯಾಣ ಗಣಪತಿ ಭಟ್ ಕಡಬದ್ವಯರ ಒಡನಾಟ ಸ್ಮರಿಸಿಕೊಂಡರು. ಯಕ್ಷಗಾನ ಅಕಾಡಮಿ ಸದಸ್ಯ ನವನೀತ ಶೆಟ್ಟಿ ಕದ್ರಿ, ಬಿಲ್ಡರ್ ರಾಘವೇಂದ್ರ ಆಚಾರ್ಯ, ಮುಂಬೈನ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಗಣೇಶ್ ಕುಮಾರ್, ಸಮಿತಿ ಗೌರವಾಧ್ಯಕ್ಷ ಜಿ.ಟಿ.ಆಚಾರ್ಯ ಮುಂಬೈ ಅತಿಥಿಯಾಗಿದ್ದರು. ಸಮಿತಿಯ ಅಧ್ಯಕ್ಷ ಬೆಳುವಾಯಿ ಸುಂದರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಡಿ. ಭಾಸ್ಕರ ಆಚಾರ್ಯ ಸ್ವಾಗತಿಸಿ, ವಂದಿಸಿ ದರು. ಪ್ರಧಾನ ಕಾರ್ಯದರ್ಶಿ ಗಿರೀಶ ಕಾವೂರು ಸನ್ಮಾನ ಪತ್ರ ವಾಚಿಸಿದರು. ನೆಲ್ಲಿಕಾರು ದಾಮೋದರ ಶರ್ಮ ಬಾರ್ಕೂರು ಕಾರ್ಯ ಕ್ರಮ ನಿರೂಪಿಸಿದರು.
ಯಕ್ಷಗಾನ ಸ್ವರಾಭಿಷೇಕ: ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಳಿಕ ಪದ್ಯಾಣ ಗಣಪತಿ ಭಟ್, ದಿನೇಶ ಅಮ್ಮಣ್ಣಾಯ, ದಿವಾಕರ ಆಚಾರ್ಯ ಪೊಳಲಿ ಅವರ ಭಾಗವತಿಕೆಯಲ್ಲಿ ಯಕ್ಷಗಾನ ಸ್ವರಾಭಿಷೇಕ ನೆರವೇರಿತು. ಮದ್ದಳೆಯಲ್ಲಿ ಉಳಿತ್ತಾಯ, ಲವಕುಮಾರ್ ಐಲ, ಚೆಂಡೆಯಲ್ಲಿ ಲೋಕೇಶ್ ಕಟೀಲು, ಯೋಗೀಶ್ ಆಚಾರ್ಯ ಉಳೇಪಾಡಿ, ಚಕ್ರತಾಳದಲ್ಲಿ ಚೇತನ್ ಸಚ್ಚರಿಪೇಟೆ, ನಾಟ್ಯದಲ್ಲಿ ಲಕ್ಷ್ಮಣ ಕುಮಾರ್ ಮರಕಡ, ರಕ್ಷಿತ್ ಶೆಟ್ಟಿ ಪಡ್ರೆ ಭಾಗವಹಿಸಿದ್ದರು.