ಬೆಂಗಳೂರು – ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದು ಕಪ್ಪು ಪಟ್ಟಿಯನ್ನಾದರೂ ಧರಿಸಲಿ, ಬಿಳಿ ಪಟ್ಟಿಯನ್ನಾದರೂ ಧರಿಸಲಿ. ಅದನ್ನು ಯಾರು ಕೇಳುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಖಂಡಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಸಂಬಂಧ ವಿಧಾನಸೌಧದ ಬಳಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅವರ ಪ್ರತಿಭಟನೆಯನ್ನು ಯಾರು ಕೇಳುತ್ತಾರೆ ಎಂದು ಹೇಳಿದರು.
ಕೇಂದ್ರದ ನರೇಂದ್ರ ಮೋದಿ ಸರ್ಕಾರ ರೈತರ ಪರವಾಗಿರುವ ಸರ್ಕಾರ. ರೈತರಿಗೆ ಧಕ್ಕೆಯಾಗುವ ಕೆಲಸವನ್ನು ನರೇಂದ್ರ ಮೋದಿ ಎಂದೂ ಮಾಡುವುದಿಲ್ಲ. ರಾಜ್ಯದಲ್ಲಿರುವ ಸರ್ಕಾರ ಹಾಗೂ ಕೇಂದ್ರದಲ್ಲಿರುವ ಸರ್ಕಾರ ಯಾವತ್ತೂ ರೈತರ ಪರವಾಗಿಯೇ ಇದೆ.
ಬಂದ್‍ಗೆ ಕರೆ ಕೊಟ್ಟು ಜನರಿಗೆ ತೊಂದರೆ ಮಾಡುವುದನ್ನು ಬಿಟ್ಟು ವಾಸ್ತವಾಂಶ ಅರ್ಥ ಮಾಡಿಕೊಳ್ಳಬೇಕು ಎಂದು ಯಡಿಯೂರಪ್ಪ ಹೇಳಿದರು.
ಬಂದ್‍ಗೆ ರಾಜ್ಯದಲ್ಲಾಗಲಿ, ದೇಶದಲ್ಲಾಗಲಿ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಿದ ಅವರು, ಅನಗತ್ಯವಾಗಿ ತೊಂದರೆ ಮಾಡಿದರೆ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಯಾವುದೋ ರಾಜಕೀಯ ಕಾರಣಕ್ಕಾಗಿ ಬಂದ್‍ಗೆ ಕರೆ ಕೊಡುವುದು ಸರಿಯಲ್ಲ. ಕರ್ನಾಟಕದಲ್ಲಂತೂ ಈ ಬಂದ್‍ಗೆ ಯಾರೂ ಸಹಕಾರ ಕೊಟ್ಟಿಲ್ಲ. ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಹೇಳಿದರು. ಕೃಷಿ ಕ್ಷೇತ್ರದಲ್ಲಿ ಸುಧಾರಣೆಗೆ ತರಲು ಮಸೂದೆಗಳನ್ನು ಜಾರಿಗೊಳಿಸಲಾಗಿದೆ ಎಂದರು.