ನವದೆಹಲಿ – ಮೊಬೈಲ್ ತಯಾರಿಕೆ ಯಲ್ಲಿ ಭಾರತ ಪ್ರಮುಖ ಹಬ್ ಆಗಿ ಪರಿವರ್ತನೆಗೊಳ್ಳುತ್ತಿದ್ದು ,ಮುಂದಿನ ಮೂರು ವರ್ಷಗಳಲ್ಲಿ ದೇಶದ ಎಲ್ಲಾ ಹಳ್ಳಿಗಳಿಗೂ ಹೈ ಸ್ಪೀಡ್ ನೆಟ್‍ವರ್ಕ್ ದೊರೆಯುವ ಫೈಬರ್ ಆಪ್ಟಿಕ್ ದತ್ತಾಂಶ ದೊರೆಯುವಂತೆ ಮಾಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿಲ್ಲಿ ಶಪಥ ಮಾಡಿದರು.
ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾವೇಶ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಕಡು ಬಡವರಿಗೂ ಮೊಬೈಲ್ ತಂತ್ರಜ್ಞಾನ ತಲುಪುವಂತಾಗಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ದೇಶ ವಾಸಿಗಳು ಮೊಬೈಲ್ ತಂತ್ರಜ್ಞಾನವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ಬಳಕೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಅವರು ಕರೆ ನೀಡಿದರು.
ಶೀಘ್ರದಲ್ಲಿಯೇ ಮಾರಣಾಂತಿಕ ಕೊರೊನಾ ಸೋಂಕಿಗೆ ಲಸಿಕೆ ಲಭ್ಯವಾಗುತ್ತಿದ್ದು, ಇದನ್ನು ಮೊಬೈಲ್ ಮೂಲಕ ಇಡೀ ದೇಶದ ಜನರಿಗೆ ತಲುಪಿಸಲು ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಪ್ರಧಾನಿಗಳು ತುರ್ತು ಪರಿಸ್ಥಿತಿಯಲ್ಲಿ ಕೊರೊನಾ ಲಸಿಕೆ ಬಳಕೆ ಮಾಡಲು ಅನುಮತಿ ನೀಡುವಂತೆ ಆಸ್ಟ್ರಾಜೆನಿಕ್, ಭಾರತ್ ಬಯೋ ಟೆಕ್ ಹಾಗೂ ಫಿಜರ್ ಸಂಸ್ಥೆಗಳು ಮಾಡಿಕೊಂಡಿರುವ ಮನವಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಫಿಜರ್ ಸಂಸ್ಥೆ ಉತ್ಪಾದಿಸಿರುವ ಕೊರೊನಾ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡುವಂತೆ ಡ್ರಗ್ಸ್ ಕಂಟ್ರೋಲ್ ಸಂಸ್ಥೆಗೆ ಮನವಿ ಮಾಡಿಕೊಂಡಿದೆ. ಸೆರಂ ಹಾಗೂ ಆಸ್ಟ್ರಾಜೆನಿಕ್ ಸಂಸ್ಥೆಗಳು ತಾವು ತಯಾರಿಸಿರುವ ಕೊರೊನಾ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿವೆ. ಹೈದರಾಬಾದ್ ಮೂಲದ ಭಾರತ್ ಬಯೋ ಟೆಕ್ ಸಂಸ್ಥೆ , ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಸಹಭಾಗಿತ್ವದಲ್ಲಿ ಕೋ ವ್ಯಾಕ್ಸಿನ್ ಲಸಿಕೆ ಕಂಡು ಹಿಡಿದಿದೆ. ಭವಿಷ್ಯದಲ್ಲಿ 5ಜಿ ತಂತ್ರಜ್ಞಾನ ಭಾರತೀಯರಿಗೆ ತಲುಪಿಸುವ ನಿಟ್ಟಿನಲ್ಲಿ ಉದ್ಯಮಗಳು ಕಾರ್ಯ ನಿರ್ವಹಿಸಬೇಕು ಎಂದು ಮೋದಿ ಇದೇ ಸಂದರ್ಭದಲ್ಲಿ ಕರೆ ನೀಡಿದರು.