ಕೇಂದ್ರ ಸರ್ಕಾರಕ್ಕೂ ಮೊದಲು ರೈತರೊಂದಿಗೆ ಮಾತನಾಡಲು ಸಿದ್ಧರಾದ ಅಮಿತ್ ಷಾ; ಇಂದು ಸಂಜೆ 7ಕ್ಕೆ ಸಭೆ – ಕಹಳೆ ನ್ಯೂಸ್
ನವದೆಹಲಿ : ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿಗಳ ವಿರುದ್ಧ ಭಾರಿ ಹೋರಾಟ ನಡೆಯುತ್ತಿದೆ. ದೇಶಾದ್ಯಂತ ರೈತರು ಮಂಗಳವಾರ ಭಾರತ್ ಬಂದ್ ನಡೆಸಿದ್ದಾರೆ. ಬಂದ್‌ಗೆ ವ್ಯಾಪಕ ಬೆಂಬಲ ಸಿಕ್ಕಿದೆ.
ಕೇಂದ್ರ ಸರ್ಕಾರದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಮಾತುಕತೆಗೆ ಆಹ್ವಾನಿಸಿದೆ. ಮಂಗಳವಾರ ಸಂಜೆ 7 ಗಂಟೆಗೆ ಮಾತುಕತೆಗೆ ಬರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರೈತರಿಗೆ ಕರೆ ನೀಡಿದ್ದಾರೆ. ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರದ ಜೊತೆ ರೈತರು ನಡೆಸಿದ 5 ಸುತ್ತಿನ ಮಾತುಕತೆ ವಿಫಲವಾಗಿದೆ. ಡಿಸೆಂಬರ್ 9ರಂದು 6ನೇ ಸುತ್ತಿನ ಮಾತುಕತೆ ನಿಗದಿಯಾಗಿದೆ.
ಆದರೆ, ಮಂಗಳವಾರ ರೈತರು ಭಾರತ್ ಬಂದ್ ನಡೆಸಿದ ಹಿನ್ನಲೆಯಲ್ಲಿ ಸಂಜೆ ಅವರ ಜೊತೆ ಗೃಹ ಸಚಿವ ಅಮಿತ್ ಶಾ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. “ಅಮಿತ್ ಶಾ ಅವರು ದೂರವಾಣಿ ಕರೆ ಮಾಡಿದ್ದರು. ಸಂಜೆ 7 ಗಂಟೆಗೆ ಮಾತುಕತೆಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಮಾತುಕತೆಗೆ ಹೋಗಲಿದ್ದಾರೆ” ಎಂದು ರೈತ ಮುಖಂಡ ರಾಕೇಶ್ ತಿಕೈಟ್ ಹೇಳಿದರು.
ಮಂಗಳವಾರ ರೈತರು ಕರೆ ನೀಡಿದ್ದ ಭಾರತ್ ಬಂದ್‌ಗೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಎಎಪಿ, ಡಿಎಂಕೆ, ಟಿಆರ್‌ಎಸ್ ಬೆಂಬಲ ನೀಡಿದ್ದವು. ಹಲವಾರು ಸಂಘಟನೆಗಳು ಸಹ ಬಂದ್ ಬೆಂಬಲಿಸಿದ್ದವು. ಆದ್ದರಿಂದ, ಈ ವಿಚಾರ ಗಂಭೀರವಾಗಿದೆ. ಶನಿವಾರ ಕೇಂದ್ರ ಕೃಷಿ ಸಚಿವರು ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆ ಮಾತುಕತೆ ನಡೆಸಿದ್ದರು. ಕೃಷಿ ನೀತಿಗಳನ್ನು ವಾಪಸ್ ಪಡೆಯುತ್ತಿರೋ?, ಇಲ್ಲವೋ? ಎಂಬ ಬೋರ್ಡ್‌ಗಳನ್ನು ಹಿಡಿದು ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮಾತುಕತೆ ವಿಫಲವಾಗಿತ್ತು. ಕೃಷಿ ಸಚಿವರು ಡಿಸೆಂಬರ್ 9ರಂದು ಮತ್ತೊಮ್ಮೆ ರೈತರ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಿದ್ದರು. ರೈತರು ರಸ್ತೆಯಲ್ಲಿಯೇ ಪ್ರತಿಭಟನೆಯನ್ನು ಮುಂದುವರೆಸಿದ್ದರು. ಆದರೆ, ಒಂದು ದಿನ ಮೊದಲೇ ಸರ್ಕಾರ ಮಾತುಕತೆಗೆ ಕರೆದಿದೆ.