ಮಂಗಳೂರು : ಬಿಜೆಪಿಯ ಸಿದ್ದಾಂತಗಳನ್ನು ಮುಂದಿಟ್ಟುಕೊಂಡು ನಾನು ’ಪಕ್ಷೇತರ’ನಾಗಿ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯುತ್ತೇನೆ ಎಂದು, ಬಿಜೆಪಿಯ ಮಾಜಿ ಮುಖಂಡ ಶ್ರೀಕರ ಪ್ರಭು ಘೋಷಿಸಿದ್ದಾರೆ. ನಗರದ ಸಿ ವಿ ನಾಯಕ್ ಹಾಲ್ ನಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವ ಜನ ಸಂಪರ್ಕ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ನನ್ನನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಪಕ್ಷದಿಂದ ಏಕಾಎಕಿ ಕಾರಣ ನೀಡದೆ ಉಚ್ಚಾಟನೆ ಮಾಡಿದ್ದು ಯಾಕೆಂದು ನನಗೆ ತಿಳಿದಿಲ್ಲ ಎಂದರು.
ಆದರೂ ಬಿಜೆಪಿ ಪಕ್ಷದ ಬಗ್ಗೆ ಕೋಪ ಇಲ್ಲ, ಆದರೆ ವ್ಯವಸ್ಥೆ ಬಗ್ಗೆ ಬೇಸರವಿದೆ . ಜೀವನದ ಕೊನೆಯ ವರೆಗೂ ಬಿಜೆಪಿ ಕಾರ್ಯಕರ್ತನಾಗಿಯೇ ಇರುತ್ತೇನೆ ಮತ್ತು ಇಲ್ಲಿಯೇ ಸಾಯುತ್ತೇನೆ ಎಂದರು. ನಾನು ಬಿಜೆಪಿಗೆ ಯಾವತ್ತು ದ್ರೋಹ ಬಗೆದಿಲ್ಲ. ಆದರೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ ಕಾರಣ ಕೊಡದೆ ಏಕಾಎಕಿ ಪಕ್ಷದಿಂದ ಉಚ್ಛಾಟಿಸಿದ್ದಾರೆ. ಆದ್ರೆ ಮಾತೃ ಪಕ್ಷಕ್ಕೆ ದ್ರೋಹ ಬಗೆಯುವ ಜಾಯಮಾನ ನನ್ನದಲ್ಲ, ಹೀಗಾಗಿ ಬಿಜೆಪಿ ಸಿದ್ಧಾಂತವನ್ನು ಜತೆಗಿರಿಸಿಕೊಂಡೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಶ್ರೀಕರ ಪ್ರಭು ಹೇಳಿದ್ದಾರೆ. ಇದೀಗ ಶ್ರೀಕರ ಪ್ರಭು ಅವರ ನಡೆ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.