ಒಂದು ಸಮಾಜದ ಮೆಚ್ಚುಗೆ ಗಳಿಸಲು ಕಾಂಗ್ರೆಸ್ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿದೆ : ನಳಿನ್ ಕುಮಾರ್ ಕಟೀಲ್
ಮಂಗಳೂರು: ಒಂದು ಸಮಾಜದ ಮೆಚ್ಚುಗೆ ಗಳಿಸುವ ಸಲುವಾಗಿ ಕಾಂಗ್ರೆಸ್ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿ ಎದುರು ರಾಜ್ಯ ಸರ್ಕಾರದ ಗೋಹತ್ಯೆ ನಿಷೇಧ ತಿದ್ದುಪಡಿ ಮಸೂದೆ ಜಾರಿಗೊಳಿಸಿದ ಸಂಭ್ರಮದಲ್ಲಿ ಗೋ ಪೂಜೆ ನೆರವೇರಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಗೋ ಸಂಸ್ಕೃತಿ ಉಳಿಸುವುದಕ್ಕೆ ಈ ಮಸೂದೆ ತರಲಾಗಿದೆ. ಯಡಿಯೂರಪ್ಪ ಈ ಹಿಂದೆ ಸಿಎಂ ಆಗಿದ್ದಾಗ ರೂಪಿಸಿದ ಗೋಹತ್ಯೆ ನಿಷೇಧ ತಿದ್ದುಪಡಿ ಮಸೂದೆಯನ್ನು ಸಿದ್ದರಾಮಯ್ಯ ಸಿಎಂ ಆದ ಕೂಡಲೇ ಏಕಾಂಗಿಯಾಗಿ ತೆಗೆದು ಹಾಕಿದ್ದರು. ಆಗ ಸಚಿವ ಸಂಪುಟವೇ ರಚನೆಯಾಗಿರಲಿಲ್ಲ. ಈಗ ಸರ್ಕಾರ ಅಧಿವೇಶನದಲ್ಲಿ ಮಸೂದೆ ಮಂಡಿಸುವುದಾಗಿ ಹೇಳಿಯೇ ಜಾರಿಗೆ ತಂದಿದೆ ಹೊರತು ಏಕಾಏಕಿ ಜಾರಿಗೊಳಿಸಿಲ್ಲ ಎಂದು ಹೇಳಿದ್ದಾರೆ. ಓಟ್ ಬ್ಯಾಂಕ್’ನ ತುಷ್ಟೀಕರಣ ನೀತಿ ಸಲುವಾಗಿ ಕಾಂಗ್ರೆಸ್ ಈಗ ಮಸೂದೆ ಬಗ್ಗೆ ಚರ್ಚೆ ಬೇಕು ಎನ್ನುತ್ತಿದೆ. ಕಾಂಗ್ರೆಸ್’ಗೆ ಕೃಷಿ ಮತುತ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ. ಆದ್ದರಿಂದ ಗೋಹತ್ಯೆ ತಡೆ ಮಸೂದೆಯನ್ನು ವಿರೋಧಿಸುತ್ತದೆ. ಇನ್ನಾದರೂ ಗೋವಿನ ಕುರಿತಾದ ತನ್ನ ನಿಲುವನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕುಎಂದು ಆಗ್ರಹಿಸಿದ್ದಾರೆ. ಗೋವುಗಳ ಮೇಲೆ ಹೆಚ್ಚಾಗಿ ಅವಲಂಬಿತರಾಗಿರುವ ರೈತರ ಜೀವನದಲ್ಲಿ ಕಾಂಗ್ರೆಸ್ ಆಟವಾಡುತ್ತಿದೆ. ಪ್ರಸ್ತುತ ಸರ್ಕಾರ ಜಾರಿಗೆ ತಂದಿರುವ ಈ ಮಸೂದೆ ಯಾವುದೇ ಧರ್ಮದ ವಿರುದ್ಧವಿಲ್ಲ. ಆದರೆ, ರೈತರನ್ನು ಬೆಂಬಲಿಸುವುದಾಗಿದೆ ಎಂದು ತಿಳಿಸಿದ್ದಾರೆ.