Wednesday, January 22, 2025
ಹೆಚ್ಚಿನ ಸುದ್ದಿ

ಮುತ್ತಪ್ಪ ರೈ ಹೆಸರಿನಲ್ಲಿ ಬೆದರಿಸುತ್ತಿದ್ದವ ಬಂಧನ – ಕಹಳೆ ನ್ಯೂಸ್

ಬೆಂಗಳೂರು: ತೆರಿಗೆ ಪಾವತಿ ಸೇರಿದಂತೆ ನಾನಾ ಕಾರಣ ನೀಡಿ ₹ 48 ಲಕ್ಷ ಪಡೆದು ವಂಚಿಸಿದ್ದ ಆರೋಪದಡಿ ಸ್ವರೂಪ್ ಅಲಿಯಾಸ್ ಅಜಿತ್ ಶೆಟ್ಟಿ ಎಂಬುವರನ್ನು ವೈಟ್‌ಫೀಲ್ಡ್ ಉಪವಿಭಾಗ ಪೊಲೀಸರು ಬಂಧಿಸಿದ್ದಾರೆ.

‘ವಂಚನೆ ಸಂಬಂಧ ಮೊಹಮ್ಮದ್ ರಫೀ ಕಿರೇಸೂರ ಎಂಬುವರು ದೂರು ನೀಡಿದ್ದರು. ಆರೋಪಿ ಸ್ವರೂಪ್ ಶೆಟ್ಟಿ ಹಾಗೂ ಅವರ ಸಹಚರರಾದ ಬಿ. ಕಿರಣ್, ಸಬಿನಾ ಹಾಗೂ ಸಂದೀಪ್ ರೈ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಸ್ವರೂಪ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ತಂಗಿಯ ಮಗ ಅರ್ಶದ್ ಮೂಲಕ ಆರೋಪಿ ಸ್ವರೂಪ್, ಮೊಹಮ್ಮದ್ ರಫೀ ಅವರಿಗೆ ಪರಿಚಯವಾಗಿದ್ದರು. ‘ಅರ್ಶದ್ ನನ್ನ ಬಳಿ ಸಾಲ ಪಡೆದು ವಾಪಸು ಕೊಟ್ಟಿಲ್ಲ’ ಎಂದು ಹೇಳಿ ಆರೋಪಿ, ದೂರುದಾರರ ಬಳಿ ಆರಂಭದಲ್ಲಿ ₹ 50 ಸಾವಿರ ಹಣ ಪಡೆದುಕೊಂಡಿದ್ದರು. ‘ಅರ್ಶದ್ ಖಾತೆಗೆ ಸ್ವಾಮೀಜಿಯೊಬ್ಬರು ₹ 25 ಲಕ್ಷ ಜಮೆ ಮಾಡಿದ್ದಾರೆ. ದೊಡ್ಡ ಮೊತ್ತದ ಹಣ ಇದಾಗಿದ್ದರಿಂದ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅರ್ಶದ್ ಬ್ಯಾಂಕ್‌ ಖಾತೆಯನ್ನು ಜಪ್ತಿ ಮಾಡಿದ್ದಾರೆ’ ಎಂದು ಹೇಳಿದ್ದ ಆರೋಪಿ, ತೆರಿಗೆ ಕಟ್ಟಬೇಕೆಂದು ಹಾಗೂ ಆ ಬಳಿಕವೇ ಹಣ ಡ್ರಾ ಮಾಡಿಕೊಳ್ಳಬೇಕೆಂದು ಹೇಳಿ ಹಂತ ಹಂತವಾಗಿ ₹ 48 ಲಕ್ಷ ಪಡೆದಿದ್ದರು. ಅದಕ್ಕೆ ಸಂಬಂಧಪಟ್ಟ ನಕಲಿ ದಾಖಲೆಗಳನ್ನೂ ಸೃಷ್ಟಿಸಿದ್ದರು. ಈ ಸಂಗತಿ ದೂರಿನಲ್ಲಿತ್ತು.’ ಎಂದೂ ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಆರೋಪಿ ವಂಚನೆ ತಿಳಿಯುತ್ತಿದ್ದಂತೆ ದೂರುದಾರರು, ಹಣ ವಾಪಸು ಕೇಳಿದ್ದರು. ಅವಾಗ, ಅರ್ಶದ್‌ ಅವರನ್ನೇ ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟಿದ್ದ ಆರೋಪಿ ಹಲ್ಲೆ ಸಹ ಮಾಡಿದ್ದರು. ದಿವಂಗತ ಮುತ್ತಪ್ಪ ರೈ ಹಾಗೂ ಅವರ ಸಹೋದರ ಎನ್ನಲಾದ ಸಂದೀಪ್ ರೈ ಹೆಸರು ಹೇಳಿಕೊಂಡು ಆರೋಪಿ ಜೀವ ಬೆದರಿಕೆಯೊಡ್ಡಿದ್ದರು. ಬಳಿಕವೇ ಮೊಹಮ್ಮದ್ ರಫೀ, ಕಾಡುಗೋಡಿಗೆ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆಗೆ ಡಿಸಿಪಿ ದೇವರಾಜ್ ವಿಶೇಷ ತಂಡ ರಚಿಸಿದ್ದರು. ಮಹಾರಾಷ್ಟ್ರಕ್ಕೆ ಹೋಗಿದ್ದ ವಿಶೇಷ ತಂಡ, ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ’ ಎಂದೂ ಮೂಲಗಳು ಹೇಳಿವೆ. ‘ಆರೋಪಿ ಸ್ವರೂಪ್ ವಿರುದ್ಧ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಲ್ಲೂ ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಲ್ಲೂ ಅವರ ವಿರುದ್ಧ ಹಲವರು ಮೊಕದ್ದಮೆ ಹೂಡಿದ್ದಾರೆ’ ಎಂದೂ ತಿಳಿಸಿವೆ.