ಬಂಟ್ವಾಳ : ಕುಡಿಯುವ ನೀರಿನ ಜೊತೆಗೆ ಬೀಸುವ ಗಾಳಿಗೂ ಬಿಲ್ ಪಾವತಿಸಬೇಕಾದ ದುಸ್ಥಿತಿ ಬಂಟ್ವಾಳ ಪುರಸಭೆ ವ್ಯಾಪ್ತಿಯ ಜನರಿಗೆ ಎದುರಾಗಿದೆ ಎಂದು ಪುರಸಭಾ ಸದಸ್ಯೆ ಝೀನತ್ ಫೈರೋಝ್ ಗೂಡಿನಬಳಿ ವ್ಯಂಗ್ಯವಾಡುವ ಮೂಲಕ ಗಂಭೀರ ಆರೋಪ ಮಾಡಿದರು.
ಬಂಟ್ವಾಳ ಪುರಸಭೆಯ ಅಧ್ಯಕ್ಷ ಮುಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿಗೆ ಭಾರೀ ಮೊತ್ತದ ಬಿಲ್ ಬರುತ್ತಿರುವ ಬಗ್ಗೆ ವ್ಯಂಗ್ಯ ಮಾಡುವ ಮೂಲಕ ಅವರು ಗಂಭೀರ ಆರೋಪ ಮಾಡಿದರು.
ನನ್ನ ವಾರ್ಡ್ ಗೂಡಿನಬಳಿ ಪರಿಸರದಲ್ಲಿ ಹಲವು ಮನೆಗಳಿಗೆ ವಿದ್ಯುತ್ ಬಿಲ್ ಗಿಂತ ಹೆಚ್ಚು ನೀರಿನ ಬಿಲ್ ಬರುತ್ತಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಸಮಗ್ರ ಕುಡಿಯುವ ನೀರಿನ ಇಲಾಖೆಗೆ ಸಂಬಂಧಿಸಿದ ಸಿಬ್ಬಂದಿಯಲ್ಲಿ ವಿಚಾರಿಸಿದರೆ, ಕೆಲವೊಮ್ಮೆ ಗಾಳಿ ಬರುವಾಗ ಮೀಟರ್ ಓಡಾಟ ಜಾಸ್ತಿಯಾಗಿ ಈ ರೀತಿಯಾಗುತ್ತಿದೆ ಎಂಬ ಉಡಾಫೆ ಹಾಗೂ ಬೇಜವಾಬ್ದಾರಿ ಉತ್ತರ ಬರುತ್ತಿದೆ ಎಂದರು. ಈ ಮೊದಲು ವಾರ್ಡಿನ ಜನರು ಬಳಸಿದ ನೀರಿಗೆ ಮಾತ್ರ ಬಿಲ್ ಪಾವತಿಸುತ್ತಿದ್ದರು. ಇದೀಗ ನೀರಿನ ಜೊತೆ ಬೀಸಿದ ಗಾಳಿಗೂ ಬಿಲ್ ಪಾವತಿಸ ಬೇಕಾದ ದುಸ್ಥಿತಿ ಇದೆ ಎಂದು ಝೀನತ್ ಫೈರೋಝ್ ಸಭೆಯ ಗಮನ ಸೆಳೆದರು. ಈ ಸಂದರ್ಭ ಉತ್ತರಿಸಿದ ಸಹಾಯಕ ಇಂಜಿನಿಯರ್ ಶೋಭಾಲಕ್ಷ್ಮಿ, ನಾನಂತೂ ಅಂತಹ ಪದಗಳಲ್ಲಿ ಉತ್ತರಿಸಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ ಸಮಸ್ಯೆಯಾಗದಂತೆ ನೋಡಿ ಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಪುರಸಭೆಯ ಎಲ್ಲಾ 27 ಸದಸ್ಯರು ಪಕ್ಷ ಬೇಧ ಮರೆತು ಪ್ರತೀ ವಾರ್ಡಿನಲ್ಲೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಆರೋಪಗಳನ್ನು ಮಾಡಿ ದರು. ಸಮಗ್ರ ಕುಡಿಯುವ ನೀರಿನ ಯೋಜನೆ ಸಂಪೂರ್ಣವಾಗಿ ಪುರಸಭೆಗೆ ಹಸ್ತಾಂತರವಾಗುವವರೆಗೆ ಪ್ರತೀ ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಬಾರದಂತೆ ಪುರಸಭೆಯ ಅಧಿಕಾರಿಗಳು ಇರುವ ಕೊಳವೆ ಬಾವಿ, ಹಳೆ ಪೈಪ್ ಲೈನ್‍ಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಹಸೈನಾರ್, ಲುಕ್ಮಾನ್, ಅಬೂಬಕ್ಕರ್ ಸಿದ್ದೀಕ್, ವಾಸು ಪೂಜಾರಿ,, ಗಂಗಾಧರ, ಗೋವಿಂದ ಪ್ರಭು, ಮುನೀಶ್ ಅಲಿ, ಇದ್ರೀಸ್ ಪಿ.ಜೆ., ಜನಾರ್ದನ ಚೆಂಡ್ತಿಮಾರ್ ಮೊದಲಾದವರು ಆಗ್ರಹಿಸಿದರು. ಈ ಸಂದರ್ಭ ಮಧ್ಯ ಪ್ರವೇಶಿಸಿ ಮಾತನಾಡಿದ ಅಧ್ಯಕ್ಷ ಶರೀಫ್, ನೀರಿನ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ ಪರಿಹಾರ ಕಂಡುಕೊಳ್ಳಲು ಒಂದು ತಿಂಗಳ ಅವಧಿ ನೀಡುತ್ತಿದ್ದು ಮುಂದಿನ ಸಾಮಾನ್ಯ ಸಭೆಗೆ ಮುಂಚಿತವಾಗಿ ಪುರಸಭೆಯ ಯಾವೆಲ್ಲ ವಾರ್ಡ್‍ಗಳಲ್ಲಿ ಸಮಸ್ಯೆ ಇದೆ ಎಂಬುದನ್ನು ಅಧಿಕಾರಿಗಳು ಜಂಟಿ ಸರ್ವೇ ಮಾಡಿ ಪರಿಹಾರೋಪಾಯಗಳನ್ನು ಕಂಡುಕೊಂಡು ಸಭೆಗೆ ವಿವರಿಸಬೇಕು ಎಂದು ಸೂಚಿಸಿದರು.
ಪುರಸಭಾ ವ್ಯಾಪ್ತಿಯ ಗುಡ್ಡೆಅಂಗಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆಟೋ ಗ್ಯಾಸ್ ಸ್ಟೇಷನ್ ಯೋಜನೆಯ ಬಗ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಸದಸ್ಯ ಮುನೀಶ್ ಅಲಿ ಪ್ರಸ್ತಾಪಿಸಿ ಮುಖ್ಯಾಧಿಕಾರಿ ಬಳಿ ಸ್ಪಷ್ಟನೆ ಬಯಸಿದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆಯದೆ ಎನ್ ಒಸಿ ನೀಡಿದ ಬಗ್ಗೆ ಮುಖ್ಯಾಧಿಕಾರಿಗಳನ್ನು ತರಾಟೆಗಳೆದರು. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಒಪ್ಪಿಸಿದ ವರದಿ ಆಧರಿಸಿ ಎನ್ ಒಸಿ ನೀಡಿರುವುದಾಗಿ ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.