ಅಶೋಕ್ ಕುಮಾರ್ ರೈ ವ್ಯಕ್ತಿಯಲ್ಲ ಶಕ್ತಿ ; ರೈ ಎಸ್ಟೇಟ್ಸ್ ಟ್ರಸ್ಟ್,ಜನಸೇವಾ ಕೇಂದ್ರದ ಫಲಾನುಭವಿಗಳ ಮತ್ತು ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ಸಮಾವೇಶದಲ್ಲಿ – ಡಿ.ವಿ. ಸದಾನಂದ ಗೌಡ
ಪುತ್ತೂರು : ಸಮಾಜದಿಂದ ನಾವು ಏನನ್ನು ಪಡೆದಿದ್ದೇವೋ, ಅದನ್ನು ಮರಳಿ ಸಮಾಜಕ್ಕೆ ನೀಡುವ ಮನೋಪ್ರವೃತ್ತಿ ಪ್ರತಿಯೊಬ್ಬರಲ್ಲೂ ಬರಬೇಕು. ಆಗ ಮಾತ್ರ ನಮ್ಮ ಋಣ ಈಡೇರಲು ಸಾಧ್ಯವಿದೆ. ಸವಲತ್ತುಗಳಿಗೆ ಕೇವಲ ಸರಕಾರಗಳನ್ನೇ ಅವಲಂಬಿಸಿದರೆ ಸಾಲದು. ಸಂಘ-ಸಂಸ್ಥೆಗಳು ಕೂಡಾ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಅಶಕ್ತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿರುವುದು ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಅನುಷ್ಠಾನ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಅವರು ಭಾನುವಾರ ದರ್ಬೆಯ ಬೈಪಾಸ್‍ನಲ್ಲಿರುವ ರೈ ಎಸ್ಟೇಟ್ಸ್ ಜನಸೇವಾ ಕೇಂದ್ರದ ಕಚೇರಿಯ ಮುಂಭಾಗದಲ್ಲಿ ನಡೆದ ಟ್ರಸ್ಟ್‍ನ ಫಲಾನುಭವಿಗಳ ಮತ್ತು ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ಸಮಾವೇಶವನ್ನು ಉದ್ಘಾಟಿಸಿದರು. ಟ್ರಸ್ಟ್‍ನ ಪ್ರವರ್ತಕ ಯುವ ನೇತಾರ ಕೆ.ಎಸ್. ಅಶೋಕ್ ಕುಮಾರ್ ರೈಯವರು ಸಮಾಜಮುಖಿ ಕಾರ್ಯ ಮಾಡುವ ಮೂಲಕ ಪುತ್ತೂರಿನ ಜನಮಾನಸದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಬಡವರ, ಶೋಷಿತರ, ದೀನದಲಿತರ, ಅಶಕ್ತರ ನೆರವಿಗೆ ಧಾವಿಸುವ ಮನಸ್ಸುಗಳು ಮುಂದೆ ಬಂದಾಗ ಮಾತ್ರ ಸುಭದ್ರ ಮತ್ತು ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ರೈಯವರು ತನ್ನ ಮಾನವೀಯ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಶೋಕ್ ಕುಮಾರ್ ರೈ ವ್ಯಕ್ತಿಯಲ್ಲ ಶಕ್ತಿ :
ಕೆ.ಎಸ್. ಅಶೋಕ್ ಕುಮಾರ್ ರೈಯವರು ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ ಸಮಾಜಮುಖಿ ಕೆಲಸ ಮಾಡುವ ಮೂಲಕ ಕೇವಲ ಒಬ್ಬ ವ್ಯಕ್ತಿಯಾಗಿರದೆ, ಶಕ್ತಿಯಾಗಿದ್ದಾರೆ. ಅವರ ಕಾರ್ಯ ಎಷ್ಟು ಶ್ರೇಷ್ಠತೆಯಿಂದ ಕೂಡಿದೆ ಎಂಬುದಕ್ಕೆ ಇಲ್ಲಿ ನೆರೆದಿರುವ ಫಲಾನುಭವಿಗಳೇ ಸಾಕ್ಷಿ. ಕೇವಲ ವೇದಿಕೆಗಳಲ್ಲಿ ಭಾಷಣ ಬಿಗಿಯುವ ಮತ್ತು ಚಪ್ಪಾಳೆ ಗಿಟ್ಟಿಸುವ ಜನರಿಂದ ಏನೂ ಪ್ರಯೋಜನವಿಲ್ಲ. ಮನಸ್ಸಿನ ಮೂಲಕ ಚಪ್ಪಾಳೆ ಗಿಟ್ಟಿಸುವ ವ್ಯಕ್ತಿಗಳ ನಿರ್ಮಾಣವಾದಾಗ ಸಮಾನಾಂತರ ಸರಕಾರ ನಿರ್ಮಾಣವಾಗಲು ಸಾಧ್ಯವಿದೆ ಎಂದರು.
ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ದೊಡ್ಡ ಕ್ರಾಂತಿ ಮಾಡಿದ್ದಾರೆ. ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ, ಗುಡಿಸಲು ಮುಕ್ತ ಸಮಾಜ ನಿರ್ಮಾಣ ಮಾಡುವ ಮಹತ್ತರ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ. ಅವರ ಕೆಲಸಗಳನ್ನು ವೃದ್ಧಿಸುವ ಕಾರ್ಯವನ್ನು ಅಶೋಕ್ ರೈಗಳು ಮಾಡುತ್ತಿದ್ದಾರೆ ಎಂದ ಸದಾನಂದ ಗೌಡ ಸಣ್ಣ ಸಣ್ಣ ಸಂಗತಿಗಳಿಂದಲೇ ಎಲ್ಲಾ ಕಾರ್ಯಗಳು ದೊಡ್ಡದಾಗುತ್ತವೆ. ರೈಗಳ ಒಳ್ಳೆಯ ಕಾರ್ಯಕ್ಕೆ ಸದಾ ನನ್ನ ಬೆಂಬಲವಿದೆ. ಅವರ ಈ ಸಮಾಜಮುಖಿ ಕಾರ್ಯ ಇನ್ನಷ್ಟು ನಡೆದು ಪುತ್ತೂರು ಸಮಸ್ಯೆ ರಹಿತ ನಾಡಾಗಿ ಮೂಡಿಬರಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್‍ನ ಪ್ರವರ್ತಕ ಹಾಗೂ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯಕೆ.ಎಸ್. ಅಶೋಕ್ ಕುಮಾರ್ ರೈ ಕೋಡಿಂಬಾಡಿ, ನಮ್ಮ ಟ್ರಸ್ಟ್ 2013ರಲ್ಲಿ ಆರಂಭವಾಗಿ ನಿರಂತರ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಪ್ರಾರಂಭದಲ್ಲಿ ಮಂಗಳೂರಿನಲ್ಲಿ ಎಚ್‍ಐವಿ ಪೀಡಿತ ಮಕ್ಕಳನ್ನು ದತ್ತು ಪಡೆದು ಅವರ ಸಂಪೂರ್ಣ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲಾಯಿತು.
ಪೆರ್ನೆ ಗ್ಯಾಸ್ ದುರಂತದಲ್ಲಿ ಸಹಕಾರ ಮಾಡಲಾಯಿತು. ಇದೀಗ ಪುತ್ತೂರಿನಲ್ಲಿ ಕಚೇರಿ ಆರಂಭಗೊಂಡಿದ್ದು, ಕಳೆದ 1 ವರ್ಷಗಳ ಅವಧಿಯಲ್ಲಿ 5,800 ಕುಟುಂಬಗಳಿಗೆ ಸ್ಪಂದನೆ ನೀಡುವ ಕಾರ್ಯ ಟ್ರಸ್ಟ್‍ನಿಂದ ಮಾಡಲಾಗಿದೆ ಎಂದ ಅವರು, ಮನೆ ಇಲ್ಲದವರಿಗೆ 49 ಮನೆಗಳ ನಿರ್ಮಾಣ ಹಾಗೂ ವಿವಿಧ ಮನೆಗಳ ರಿಪೇರಿ ಕಾರ್ಯ, ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ 620 ಮಂದಿಗೆ ಹೊಲಿಗೆ ತರಬೇತಿ ನೀಡಿ ಉಚಿತ ಹೊಲಿಗೆ ಯಂತ್ರದ ವಿತರಣೆ, ಬಡ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ, ಉಚಿತ ವಿದ್ಯಾಭ್ಯಾಸ, ಆಸ್ಪತ್ರೆ ವೆಚ್ಚ, ದೀಪಾವಳಿಯ ಸಂದರ್ಭದಲ್ಲಿ 12,500ಕ್ಕೂ ಮಿಕ್ಕಿ ಜನರಿಗೆ ಸಹಾಧನ ವಸ್ತ್ರದಾನ ಮೊದಲಾದ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದೆ ಎಂದರು.
ಇದು ಶಕ್ತಿ ಪ್ರದರ್ಶನವಲ್ಲ :
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಆಶಯದಂತೆ ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ಸ್ಪಂದನೆ ನೀಡಬೇಕೆಂಬುದು ನನ್ನ ಉದ್ದೇಶ. ನಾನು ಚಿಕ್ಕಂದಿನಿಂದಲೇ ಬಹಳ ಕಷ್ಟ ಪಟ್ಟು ಮೇಲೆ ಬಂದವ. ಇದರಿಂದ ಬೇರೆಯವರ ಕಷ್ಟ ನನಗೆ ಅರಿವಿದೆ. ಅದಕ್ಕಾಗಿ ನನ್ನ ಸಂಪಾದನೆಯ ಸ್ವಲ್ಪ ಪಾಲನ್ನು ಸಮಾಜಕ್ಕೆ ನೀಡುತ್ತಿದ್ದೇನೆ. ನನ್ನ ಪೋಷಕರು ಹಾಕಿಕೊಟ್ಟ ಹಾದಿಯಲ್ಲಿ ನಾನು ಮುನ್ನಡೆಯುತ್ತಿದ್ದೇನೆ. ಈ ಸಮಾವೇಶ ನನ್ನ ಶಕ್ತಿಪ್ರದರ್ಶನವಲ್ಲ. ನರೇಂದ್ರ ಮೋದಿಯವರ ಕನಸಿನಂತೆ ಬಡವರೆಲ್ಲರೂ ಮೇಲೆ ಬರಬೇಕು ಎಂಬ ಆಶಯದಿಂದ ನಾನು ಈ ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗಿದ್ದೇನೆ ಎಂದರು.
ಆವಶ್ಯಕ ಸೇವೆ :
ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಟ್ರಸ್ಟ್ ಮೂಲಕ ಅಸಹಾಯಕರಿಗೆ ವಿವಿಧ ರೀತಿಯ ಸಹಕಾರ, ಸರಕಾರದ ಸವಲತ್ತು ಪಡೆಯುವಲ್ಲಿ ವಂಚಿತರಾದವರಿಗೆ, ಆಶಕ್ತರ ನೋವಿಗೆ ಸ್ಪಂಧಿಸುತ್ತಿರುವ ಸೇವೆ ಇಂದು ಸಮಾಜ್ಕಕೆ ಆವಶ್ಯಕವಾಗಿದೆ. ಎಂದರು. ಪಂಡಿತ್ ದೀನ್ ದಯಾಳ್‍ರವರ ಉದ್ದೇಶ, ಪ್ರಧಾನಿ ಮೋದಿಯವರ ಯೋಚನೆ, ಯೋಜನೆಗಳಿಗೆ ಪೂರಕವಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಯೋಜೆನಗಳನ್ನು ತಲುಪಿಸುವಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. ಅಶೋಕ್ ರೈಗಳ ಕಾರ್ಯ ನಿಜಕ್ಕೂ ಮಾದರಿಯಾಗಿದೆ ಎಂದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಸರಕಾರ, ಜನಪ್ರತಿನಿಧಿಗಳು ಮಾಡಬೇಕಾದ ಕಾರ್ಯಗಳನ್ನು ಅಶೋಕ್ ಕುಮಾರ್ ರೈಯವರು ಟ್ರಸ್ಟ್ ಮೂಲಕ ಮಾಡುತ್ತಿರುವುದು ಅವರ ಕಾರ್ಯದಕ್ಷತೆಯನ್ನು ತೋರಿಸುತ್ತದೆ ಎಂದರು.
ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಪ್ರಮುಖ್ ಅಪ್ಪಯ್ಯ ಮಣಿಯಾಣಿ, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಶುಭ ಹಾರೈಸಿದರು. ವೇದಿಕೆಯಲ್ಲಿಅಶೋಕ್ ರೈಯವರ ತಾಯಿ ಗಿರಿಜಾ ಎಸ್ ರೈ, ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಮುನೀರ್ ನಿನ್ನಿಕಲ್ ಉಪಸ್ಥಿತರಿದ್ದರು. ಶ್ರಮಜೀವಿ ಕಟ್ಟಡ ಕಾರ್ಮಿಕ ಸಂಘದ ಸದಸ್ಯ ಚಂದ್ರಶೇಖರ ಮಡಿಮಾಳ ಸ್ವಾಗತಿಸಿ, ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ವಂದಿಸಿದರು. ಲೋಕೇಶ್ ಬೆತ್ತೋಡಿ ಹಾಗೂ ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಸಮಾವೇಶದಲ್ಲಿ ಅಶೋಕ್ ಕುಮಾರ್ ರೈಯವರ ಕುರಿತಾದ ಪುಸ್ತಕವನ್ನು ಡಿ.ವಿ. ಸದಾನಂದ ಗೌಡ ಬಿಡುಗಡೆಗೊಳಿಸಿದರು. ಈ ಸಂದರ್ಭ 42 ಕುಟುಂಬಗಳಿಗೆ ಸಹಾಯಧನದ ಚೆಕ್, 15 ಕುಟುಂಬಗಳಿಗೆ ಆರ್‍ಟಿಸಿ ವಿತರಣೆ, 20 ಮಂದಿಗೆ ಟೈಲರಿಂಗ್ ಮೆಷಿನ್ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ವರದಿ : ಕಹಳೆ ನ್ಯೂಸ್