ಉಡುಪಿ :ಉಡುಪಿ ಜಿಲ್ಲೆಯ ಡಾ.ಬನ್ನಂಜೆ ಗೋವಿಂದಾಚಾರ್ಯ(84) ಇಂದು ತಮ್ಮ ಸ್ವಗೃಹ ಅಂಬಲಪಾಡಿಯಲ್ಲಿ ಬೆಳಗ್ಗೆ 11 ಗಂಟೆಗೆ ನಿಧನರಾಗಿದ್ದಾರೆ. ದೇಶದ ಪ್ರಮುಖ ವಿದ್ವಾಂಸರದಲ್ಲಿ ಒಬ್ಬರೆನಿಸಿಕೊಂಡಿದ್ದಂತ ಬನ್ನಂಜೆ ಗೋವಿಂದಾಚಾರ್ಯರು ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ 1936ರಲ್ಲಿ ಜನಿಸಿದ್ದರು.
ಇವರು ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದರು.ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಗೋವಿಂದಾಚಾರ್ಯರು ಅನೇಕ ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಶ್ರೀ ಶ್ರೀ ತ್ರಿವಿಕ್ರಮಾಚಾರ್ಯದಾಸರ ‘ಆನ೦ದಮಾಲಾ’, ತ್ರಿವಿಕ್ರಮ ಪ೦ಡಿತರ ‘ವಾಯುಸ್ತುತಿ’,’ವಿಷ್ಣುಸ್ತುತಿ’,’ಭಾಗವತ ತಾತ್ಪರ್ಯ’, ಮಧ್ವಾಚಾರ್ಯರ ಮಹಾಭಾರತದ ತಾತ್ಪರ್ಯದ ಟೀಕಾ ಕೃತಿಯಾದ ‘ಯಮಕ ಭಾರತ’ ಇತ್ಯಾದಿ ಕೃತಿಗಳಿಗೆ ಟಿಪ್ಪಣಿಯನ್ನು ಬರೆದಿದ್ದಾರೆ.ಶ್ರೀ ಮದ್ಭಗವದ್ಗೀತೆ,ಶ್ರೀ ಸೂಕ್ತ ,ಶಿವಸೂಕ್ತ, ನರಸಿಂಹ ಸ್ತುತಿ,ಮಧ್ವಾಚಾರ್ಯರ ‘ಮಾಧ್ವರಾಮಾಯಣ’, ರಾಜರಾಜೇಶ್ವರಿ ಯತಿಗಳ ಮಂಗಲಾಷ್ಟಕ ಇತ್ಯಾದಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಡಾ.ಬನ್ನಂಜೆ ಗೋವಿಂದಾಚಾರ್ಯರು ಕನ್ನಡ ಲನಚಿತ್ರ ಲೋಕಕ್ಕೂ ಕೆಲಸ ಮಾಡಿದ್ದಾರೆ. ಜಿ.ವಿ. ಅಯ್ಯರ್ ಅವರ ಸಂಸ್ಕೃತ ಚಲನಚಿತ್ರ ‘ಶ್ರೀ ಶಂಕರಾಚಾರ್ಯ’, ‘ಶ್ರೀ ಮಧ್ವಾಚಾರ್ಯ’, ‘ಶ್ರೀ ರಾಮಾನುಜಾಚಾರ್ಯ’ ಚಲನಚಿತ್ರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸಿದ್ದಲ್ಲದೆ, ಸಂಭಾಷಣೆಯನ್ನು ರಚಿಸಿದ್ದಾರೆ. ಗೋವಿಂದಾಚಾರ್ಯರು ಕನ್ನಡದ ಖ್ಯಾತ ನಟ ವಿಷ್ಣುವರ್ಧನರ ಆಧ್ಯಾತ್ಮಿಕ ಗುರುವಾಗಿದ್ದರು.