ಬೆಂಗಳೂರು: ಚಂದನವನ ಕಲಾ ಶಾರದೆ ಜಯಂತಿ ಸೋಮವಾರ ಉಸಿರಾಟದ ತೊಂದರೆಯಿಂದಾಗಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ 30 ವರ್ಷಗಳಿಂದಲೂ ಜಯಂತಿ ಆಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ರು. ಆದ್ರೆ ನಿತ್ಯ ಔಷಧಿ ತೆಗೆದುಕೊಳ್ಳುತ್ತಿದ್ದರಿಂದ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದ್ರೆ ಭಾನುವಾರ ರಾತ್ರಿ ಏಕಾಏಕಿ ಉಸಿರಾಟದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ವೈದ್ಯರ ಸಲಗಹೆ ಮೇರೆಗೆ ಜಯಂತಿ ಅವರನ್ನು ಮಗ ಕೃಷ್ಣಮೂರ್ತಿ ಆಸ್ಪತ್ರೆಗೆ ದಾಖಲಿಸಿದ್ರು.
ಇತ್ತ ಜಯಂತಿ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದ ನಂತರ ಸ್ಯಾಂಡಲ್‍ವುಡ್ ಹಿರಿಯ, ಕಿರಿಯ ಕಲಾವಿದರೆಲ್ಲಾ ಆಸ್ಪತ್ರೆಯತ್ತ ಆಗಮಿಸಿದರು. ಸದ್ಯ ಜಯಂತಿ ಅವರ ಆರೋಗ್ಯ ಸುಧಾರಿಸುತ್ತಿದೆ. ಆಸ್ಪತ್ರೆಗೆ ದಾಖಲಿಸಿದಾಗ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದು, ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ನಾಲ್ಕೈದು ದಿನಗಳಲ್ಲಿ ಸಂಪೂರ್ಣ ಗುಣಮುಖರಾಗುವ ವಿಶ್ವಾಸವನ್ನ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ವ್ಯಕ್ತಪಡಿಸಿದ್ರು.
ಐಸಿಯುನಲ್ಲಿರುವ ನಟಿ ಜಯಂತಿಗೆ ವಿಕ್ರಂ ಆಸ್ಪತ್ರೆ ಮುಖ್ಯ ವೈದ್ಯರಾದ ಡಾ. ಸತೀಶ್ ಚಿಕಿತ್ಸೆ ನೀಡ್ತಿದ್ದಾರೆ. ಇತ್ತ ಜಯಂತಿ ಆಸ್ಪತ್ರೆಗೆ ದಾಖಲಾಗ್ತಿದ್ದಂತೆ ಅವ್ರ ಆರೋಗ್ಯ ವಿಚಾರಿಸಲು ಅನೇಕರು ಆಸ್ಪತ್ರೆಗೆ ವಿಸಿಟ್ ಮಾಡಿದ್ರು. ನಟಿ ತಾರಾ, ಹಿರಿಯ ನಟಿಯರಾದ ಲೀಲಾವತಿ, ಸರೋಜಾ ದೇವಿ, ಗಿರಿಜಾ ಲೋಕೇಶ್, ಹೇಮ ಚೌಧರಿ, ದೊಡ್ಡಣ್ಣ, ಭೇಟಿ ನೀಡಿದ್ರು. ನಟ ವಿನೋದ್ ರಾಜ್ ಕುಮಾರ್, ಸರಿಗಮ ವಿಜಿ, ನಿರ್ದೇಶಕ ಭಗವಾನ್ ಕೂಡ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ರು.