ಆದ್ಯ ಸುಲೋಚನಾ ಮುಳಿಯ ನೇತೃತ್ವದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಮಾಡಿ ಪುತ್ತೂರಿನ ವಿದ್ಯಾರ್ಥಿಗಳಿಂದ ಸಮಾಜಮುಖಿ ಚಿಂತನೆಗೆ ನಾಂದಿ – ಕಹಳೆ ನ್ಯೂಸ್
ಪುತ್ತೂರು, ಡಿ.16 : ಕೇಶದಾನದಿಂದ ಕ್ಯಾನ್ಸರ್ ಕಾರಣದಿಂದಾಗಿ ರೂಪ ಕಳೆದುಕೊಂಡ ರೋಗಿಗಳಿಗೆ ವಿಗ್ ನೀಡುವುದರ ಮೂಲಕ ಅವರ ಮುಖದಲ್ಲಿ ಮಂದಹಾಸ ತರಬಹುದು. ರಕ್ತದಾನ, ಅಂಗದಾನ ಇದರಂತೆ ಕೇಶದಾನ ಮಾಡುವ ನಿಟ್ಟಿನಲ್ಲಿ ಪುತ್ತೂರಿನ 9 ಶಾಲಾ ವಿದ್ಯಾರ್ಥಿಗಳು ಯೋಜನೆಯೊಂದನ್ನು ರೂಪಿಸಿದ್ದಾರೆ. ಕೇಶದಾನ ಮಾಡುವ ಅಪರೂಪದ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿದ್ದು ಇದು ಉತ್ತಮ ಯೋಜನೆಯಾಗಿ ಹೊರಹೊಮ್ಮಿದೆ.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಆದ್ಯ ಸುಲೋಚನಾ ಮುಳಿಯ ಎಂಬ ಕುವರಿಯು ತಾನು ಮಡಿಕೇರಿಯಲ್ಲಿ 5ನೇ ತರಗತಿ ಓದುತ್ತಿರುವಾಗಲೇ ಈ ಕೇಶ ದಾನದ ಮಹತ್ವದ ಬಗ್ಗೆ ಅರಿತಿದ್ದಾಳೆ. ತನ್ನ ಪ್ರೀತಿಯ ಟೀಚರ್ ತಲೆಗೆ ಒಂದು ದಿವಸ (ಸ್ಕಾರ್ಫ್) ಬಟ್ಟೆ ಕಟ್ಟಿಕೊಂಡು ಬಂದದ್ದನ್ನು ನೋಡಿ ಭಿಕ್ಕಿ ಭಿಕ್ಕಿ ಅತ್ತ ಈ ಬಾಲಕಿಯು ಆ ಬಳಿಕ ಕೇಶ ದಾನ ಮಾಡುವತ್ತ ಪ್ರೇರೇಪಿತಳಾದಳು. ತನ್ನ 5ನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕಿ ತನ್ನ ಗೆಳತಿಯೋರ್ವಳಿಗೆ ತನ್ನ ಕೂದಲನ್ನು ಬೆಳೆಸಿ ಪೋಷಿಸಿ ದಾನ ಮಾಡಬಹುದು ಎಂದು ತಿಳಿಸಿದಳು. ಹಾಗೆ ಲಾಕ್‍ಡೌನ್ ಸಂದರ್ಭದಲ್ಲಿ ತನ್ನ 10ರಿಂದ 12 ಇಂಚು ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ವಿಗ್ ಮಾಡಿ ಉಚಿತವಾಗಿ ಒದಗಿಸುವ ಒಂದು ಸಂಸ್ಥೆಗೆ ದಾನ ಮಾಡಿದಳು. ತನ್ನ ಈ ನಡೆಯನ್ನು ಎಲ್ಲರೂ ಪ್ರಶಂಸಿಸಿದನ್ನು ಕಂಡ ಇವಳು ಇದೀಗ ಸೀಡ್ಸ್ ಆಫ್ ಹೋಪ್ ಎಂಬ ತಂಡ ಕಟ್ಟಿದ್ದಾಳೆ.
ಕ್ಯಾನ್ಸ್‌ರ್‌ನಿಂದ ತಲೆ ಕೂದಲನ್ನು ಕಳೆದುಕೊಂಡಿರುವವರ ಮುಖದಲ್ಲಿ ಮಂದಹಾಸ ತರುವ ನಿಟ್ಟಿನಲ್ಲಿ ಕೇಶ ದಾನ ಮಾಡಿ ನೆರವಾಗಿ ಎಂದು ಹೇಳುತ್ತಿರುವ ಈ ತಂಡದಲ್ಲಿ ಆದ್ಯ ಸುಲೋಚನಾ ಮುಳಿಯಳೊಂದಿಗೆ 8 ಮಂದಿ ಕೈ ಜೋಡಿಸಿದ್ದಾರೆ. ಅದರಲ್ಲಿ ಇಷಾ ಸುಲೋಚನಾ ಮುಳಿಯ, ವರ್ಷ ಭಟ್, ನೇಹ ಭಟ್, ಅಕ್ಷಯ ಪಾರ್ವತಿ ಸರೋಳಿ, ಸಮರ್ಥರಾಮ ಮುಳಿಯ, ಕೌಶಲ್ ಎಸ್.ವೈ, ಕನ್ಯ ಸಚಿನ್ ಶೆಟ್ಟಿ, ಹಿತ ಕಜೆ ಈ ವಿದ್ಯಾರ್ಥಿಗಳು ಭರವಸೆಯ ನಗು ಕಾರ್ಯಕ್ರಮದಲ್ಲಿ ಜೊತೆಯಾಗಿದ್ದಾರೆ. ಹಾಗೆಯೇ 6 ಸಂಸ್ಥೆಗಳಾದ ಮುಳಿಯ ಪ್ರತಿಷ್ಠಾನ, ರೋಟರಿ ಪುತ್ತೂರು ಈಸ್ಟ್, ರೋಟರಿ ಪುತ್ತೂರು ಸಿಟಿ, ಜೇಸಿಐ ಪುತ್ತೂರು, ಜೇಸಿರೆಟ್ ಪುತ್ತೂರು, ಇನ್ನರ್‍ವೀಲ್ ಪುತ್ತೂರು, ಲೇಡಿಸ್ ಬ್ಯೂಟಿ ಅಸೋಸಿಯೇಷನ್, ಹೇರ್ ಕ್ರೌನ್ ಸಂಸ್ಥೆಗಳು ಕೈ ಜೋಡಿಸಿ ಶ್ರಮಿಸುತ್ತಿದೆ.
ನಮ್ಮೊಂದಿಗೆ ಇಚ್ಛಿಸುವವರು ಜೊತೆಯಾಗಬಹುದು. 10ರಿಂದ 12 ಇಂಚು ಕೂದಲು ಇದ್ದಲ್ಲಿ ದಾನ ಮಾಡಬಹುದು. ನಮ್ಮ ಈ ಕಾರ್ಯಕ್ರಮ ಡಿಸೆಂಬರ್ 20ರಂದು ಕೋರ್ಟು ರೋಡ್‍ನ ಮುಳಿಯ ಜೇಸಿಐ ಹಾಲ್‍ನಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಬಂದು ನಿಮ್ಮ ತಲೆಕೂದಲನ್ನು ದಾನ ಮಾಡಲು ಅನಾನುಕೂಲವಿದ್ದಲ್ಲಿ ನಿಮ್ಮ ಮನೆಯಲ್ಲೇ ಕತ್ತರಿಸಿ ಕಳುಹಿಸಬಹುದು ಎಂದು ಈ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.
8 ಜನರ ಕೂದಲು ಶೇಖರಣೆ ಮಾಡಿದಾಗ ತಲೆಕೂದಲು ಇಲ್ಲದ ಒಬ್ಬ ವ್ಯಕ್ತಿಗೆ ಟೋಪನ್ ತಯಾರಿಸಲಾಗುತ್ತದೆ. ಈಗಾಗಲೇ 30 ಜನ ರಿಜಿಸ್ಟರ್ ಮಾಡಿದ್ದಾರೆ ಎಂಬುವುದು ಸಂತಸದ ವಿಚಾರವಾಗಿದೆ. ಹಲವಾರು ಜನರಿಗೆ ಆಸಕ್ತಿ ಇದ್ದರೂ ಒಂದೆರಡು ಇಂಚು ಕಡಿಮೆ ಇರುವುದರಿಂದ ಇನ್ನೊಮ್ಮೆ ಯೋಜನೆ ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕೇಶದಾನ ಕಾರ್ಯಕ್ರಮಕ್ಕೆ ಸಂಬಂಧಿಸಿ ಮಾಹಿತಿ ಬೇಕಾದಲ್ಲಿ ಫೋನ್ ನಂ. 9632567916, 9164010263 ಇಮೇಲ್ : seedsofhope916@gmail.com ಗೆ ಸಂಪರ್ಕಿಸಬಹುದು.