ಡೆಹರಾಡೂನ್ : “ನಾವು ಕಟ್ಟೆಚ್ಚರದಿಂದ ಇದ್ದೇವೆ; ಡೋಕ್ಲಾಂ ನಲ್ಲಿ ಯಾವುದೇ ಅನಿರೀಕ್ಷಿತ ವಿದ್ಯಮಾನ ಸಂಭವಿಸಿದರೂ ಅದನ್ನು ಎದುರಿಸುವುದಕ್ಕೆ ನಾವು ಸಮರ್ಥರಿದ್ದೇವೆ’ ಎಂದು ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ದೇಶದ ರಕ್ಷಣಾ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಉತ್ತರಾಖಂಡಕ್ಕೆ ಭೇಟಿ ನೀಡಿರುವ ನಿರ್ಮಲಾ ಅವರು “ದೇಶದ ಸೇನೆಯನ್ನು ನಿರಂತರವಾಗಿ ಆಧುನೀಕರಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ’ ಎಂದು ಹೇಳಿದರು.
ಭಾರತದ ಶಕ್ತಿಯುತ ಸೇನಾ ಪಡೆಯು ದೇಶದ ಭೌಗೋಳಿಕ ಸಾರ್ವಭೌಮತೆಯನ್ನು ಕಾಪಿಡಲು ಸಮರ್ಥವಾಗಿದೆ ಎಂದು ನಿರ್ಮಲಾ ಅವರು ಅದ್ವಿತೀಯ ಸೇನಾನಿಗಳ ವಿಧವೆಯರನ್ನು ಮತ್ತು ಹಿರಿಯ ಯೋಧರನ್ನು ಗೌರವಿಸುವ ಸಲುವಾಗಿ ಸಿಎಂ ನಿವಾಸದಲ್ಲಿ ನಡೆದ ಕಾರ್ಯಕ್ರಮ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.