ಅಯೋಧ್ಯೆ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇದೇ ಆಗಸ್ಟ್ ತಿಂಗಳಿನಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದೆ. ಟ್ರಸ್ಟ್ ಅಡಿಯಲ್ಲಿ ಮಂದಿರ ನಿರ್ಮಾಣದ ಪ್ರಕ್ರಿಯೆ ಮುಂದುವರೆದಿದ್ದು, ಸಾಮೂಹಿಕ ಕಾರ್ಯಕ್ರಮದ ಮೂಲಕ ಜನರಿಂದ ಸಂಗ್ರಹಿಸುವ ದೇಶದ ಹಣದಿಂದಲೇ ಮಂದಿರ ನಿರ್ಮಿಸಲಾಗುವುದು” ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
“ಜನರಿಂದ ಸಂಗ್ರಹಗೊಂಡ ಹಣದಲ್ಲಿಯೇ ಮಂದಿರ ನಿರ್ಮಾಣ ಮಾಡಲಾಗುವುದು. ವಿದೇಶದ ದೇಣಿಗೆ ಪಡೆಯಲು ಟ್ರಸ್ಟ್ ಗೆ ಅನುಮೋದನೆಯಿಲ್ಲದ ಕಾರಣ ದೇಶದ ಹಣದಿಂದಲೇ ಮಂದಿರ ನಿರ್ಮಿಸಲಾಗುವುದು” ಎಂದು ಹೇಳಿದ್ದಾರೆ.
ಈ ರಾಮಮಂದಿರವು “ರಾಷ್ಟ್ರೀಯ ಮಂದಿರ”ದ ರೂಪ ಪಡೆದುಕೊಳ್ಳಲಿದೆ ಎಂದ ಅವರು, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಸಾಮೂಹಿಕ ಸಂಪರ್ಕ ಹಾಗೂ ಕೊಡುಗೆಯ ಅಭಿಯಾನವನ್ನು ಆರಂಭಿಸಲಿದೆ ಎಂದರು. ದೇವಸ್ಥಾನದ ಪ್ರಸ್ತಾವಿತ ನೂತನ ಮಾದರಿಯ ಛಾಯಾಚಿತ್ರ ಕೂಡ ಈ ಅಭಿಯಾನದ ಮೂಲಕ ಕೋಟ್ಯಂತರ ಮನೆಗಳನ್ನು ಸೇರಲಿದೆ ಎಂದು ಹೇಳಿದರು. ರಾಮ ಭಕ್ತರಿಂದ ಸ್ವಯಂ ದೇಣಿಗೆಯನ್ನು ಸ್ವೀಕರಿಸಲಾಗುತ್ತಿದ್ದು, 10, 100, 1000 ರೂಗಳ ಕೂಪನ್ ಗಳನ್ನು ಪರಿಚಯಿಸಲಾಗುವುದು ಎಂದು ತಿಳಿಸಿದರು.
ಆರ್ಥಿಕ ವ್ಯವಹಾರದ ಕುರಿತು ಪಾರದರ್ಶಕತೆಯನ್ನು ಕಾಪಾಡಲು ಟ್ರಸ್ಟ್, 10 ರೂಗಳ 4 ಕೋಟಿ ಕೂಪನ್ ಹಾಗೂ 100 ರೂಗಳ 8 ಕೋಟಿ ಕೂಪನ್ ಹಾಗೂ 1,000 ರೂಗಳ 12 ಲಕ್ಷ ಕೂಪನ್ ಗಳನ್ನು ಮುದ್ರಿಸಿದೆ. ಟ್ರಸ್ಟ್ ಗೆ ಅವಶ್ಯಕ ಅನುಮೋದನೆ ಇಲ್ಲದ ಕಾರಣ ವಿದೇಶಿ ದೇಣಿಗೆ ಸಂಗ್ರಹಕ್ಕೆ ಅವಕಾಶವಿಲ್ಲ. ಸಿಎಎಸ್ ಆರ್ ಮೂಲಕ ಕಳುಹಿಸಿದ ಹಣವನ್ನು ಪರಿಗಣಿಸಬಹುದು ಎಂದು ತಿಳಿಸಿದ್ದಾರೆ. ಸದ್ಯಕ್ಕೆ ದೇವಸ್ಥಾನ ನಿರ್ಮಾಣಕ್ಕೆ ಆಗುವ ವೆಚ್ಚ ಹಾಗೂ ಸಂಗ್ರಹಿಸಬೇಕಾದ ಮೊತ್ತದ ಕುರಿತು ಯಾವುದೇ ಅಂದಾಜು ಹಾಗೂ ಗುರಿ ನಿಗದಿಪಡಿಸಿಲ್ಲ. ದೇಣಿಗೆ ಸಂಗ್ರಹವಷ್ಟೇ ಅಲ್ಲ, ಈ ಅಭಿಯಾನದ ಮೂಲಕ ಐತಿಹಾಸಿಕ ರಾಮ ಜನ್ಮಭೂಮಿಯ ಮಹತ್ವವನ್ನೂ ಜನರಿಗೆ ತಿಳಿಸಲಾಗುವುದು ಎಂದು ಹೇಳಿದರು.