ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಏಳು ವರ್ಷದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಪ್ರಕರಣ ಸಂಬಂಧ ಕೋಲಾರದಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ.
ಬೆಳ್ತಂಗಡಿಯ ಉಜಿರೆ ಉದ್ಯಮಿ ಎ.ಕೆ. ಶಿವನ್ ಎಂಬುವರ ಏಳು ವರ್ಷದ ಮೊಮ್ಮಗ ಅನುಭವ್ ನನ್ನು ಮನೆ ಬಳಿ ಆಟವಾಡುತ್ತಿದ್ದ ಸಂದರ್ಭ ಗುರುವಾರ ಸಂಜೆ ಅಪಹರಣ ಮಾಡಲಾಗಿತ್ತು. ಬಾಲಕನ ತಂದೆ ಬಿಜೋಯ್, ಹಾರ್ಡ್ ವೇರ್ ಉದ್ಯಮದಲ್ಲಿದ್ದು, ಶುಕ್ರವಾರ ಮನೆಯವರಿಗೆ ಕರೆ ಮಾಡಿದ ಅಪಹರಣಕಾರರು ಬಾಲಕನ ಬಿಡುಗಡೆಗೆ 17 ಕೋಟಿ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಆನಂತರ ಹತ್ತು ಕೋಟಿಗೆ ಬೇಡಿಕೆ ಇಟ್ಟು, ಕೊನೆಗೆ 25 ಲಕ್ಷ ನೀಡುವಂತೆ ಕೇಳಿದ್ದರು.
ಮಂಗಳೂರು ಪೊಲೀಸರು ಬಾಲಕನ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸಿದ್ದರು. ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂರ್ನಹೊಸಳ್ಳಿ ಗ್ರಾಮದಲ್ಲಿ ಶನಿವಾರ ಆರು ಜನರನ್ನು ಬಂಧಿಸಲಾಗಿದೆ. ಲಾರ ಎಸ್ ಪಿ ಕಾರ್ತಿಕ್ ರೆಡ್ಡಿ ನೆರವಿನಿಂದ ಮಂಗಳೂರು ಪೊಲೀಸರ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿದೆ. ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್ ಹಾಗೂ ಮುನೇಶ್ ಎಂಬುವರ ಮನೆಯಲ್ಲಿ ಬಾಲಕ ಅನುಭವ್ ನನ್ನು ಇರಿಸಲಾಗಿತ್ತು. ಮಂಡ್ಯ ಮೂಲದ ಗಂಗಾಧರ್, ಬೆಂಗಳೂರಿನ ಕೋಮಲ್ ಎಂಬುವರನ್ನು ಬಂಧಿಸಲಾಗಿದೆ. ಶನಿವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವುದಾಗಿ ತಿಳಿದುಬಂದಿದೆ.