ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಗೊಂಡ ಕಾರಣ ಅಂಗಾಂಗ ಕಸಿ ಕೂಡ ಆರಂಭಗೊಂಡಿದೆ.
ಇಂತಹ ಸಂದರ್ಭದಲ್ಲಿ ನಗರದ ಕೋಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಂತ 49 ವರ್ಷದ ಮಹಿಳೆಯೊಬ್ಬಳು, ಐವರಿಗೆ ಅಂಗಾಂಗ ದಾನ ಮಾಡಿ ಆಸರೆಯಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ಯಲಹಂಕ ನಿವಾಸಿಯಾಗಿದ್ದ ಅವರು, ಡಿಸೆಂಬರ್ 13 ರಂದು ರಸ್ತೆ ಅಪಘಾತದಲ್ಲಿ ತಲೆಗೆ ಬಲವಾಗಿ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಇಂತಹ ಮಹಿಳೆಗೆ ಕೃತಕ ಉಸಿರಾಟದ ಸಂಪರ್ಕ ಕಲ್ಪಿಸಲಾಗಿತ್ತು. ಚಿಕಿತ್ಸೆಯ ಬಳಿಕವೂ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಇದೇ ಸಂದರ್ಭದಲ್ಲಿ ಮಹಿಳೆಯ ಮೆದುಳು ನಿಷ್ಕ್ರೀಯಗೊಂಡಿದ್ದನ್ನು ಕುಟುಂಬಸ್ಥರಿಗೆ ಖಚಿತಪಡಿಸಿ, ಅಂಗಾಂಗ ದಾನದ ಬಗ್ಗೆ ಮನವೊಲಿಸಿದ್ದಾರೆ. ವೈದ್ಯರ ಮನವೊಲಿಕೆಗೆ ಒಪ್ಪಿದ ಕುಟುಂಬಸ್ಥರು ಬಿಜಿಎಸ್ ಆಸ್ಪತ್ರೆಗೆ ಯಕೃತ್, ಅಪೋಲೋ ಆಸ್ಪತ್ರೆಗೆ ಎಡ ಮೂತ್ರಪಿಂಡ, ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಬಲ ಮೂತ್ರಪಿಂಡ, ನಾರಾಯಣ ನೇತ್ರಾಲಯಕ್ಕೆ ಕಣ್ಣುಗಳನ್ನು, ಜಯದೇವ ಆಸ್ಪತ್ರೆಗೆ ಹೃದಯ, ಸೇರಿದಂತೆ ಐವರಿಗೆ ಅಂಗಾಂಗ ದಾನ ಮಾಡಿ, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ.