Friday, September 20, 2024
ಸುದ್ದಿ

ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾನ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ; ‘ಅರೈಸ್‌ ಅವೇಕ್‌’ ಪಾರ್ಕ್‌ ಲೋಕಾರ್ಪಣೆ – ಕಹಳೆ ನ್ಯೂಸ್

ಮಹಾನಗರ: ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾನ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಶುಭ ಘಳಿಗೆಯಲ್ಲಿ ಕರಂಗಲ್ಪಾಡಿಯಲ್ಲಿ ನವೀಕೃತಗೊಳಿಸಿರುವ ಅಕ್ಯುಪ್ರಶರ್‌ ವಾಕಿಂಗ್‌ ಟ್ರ್ಯಾಕ್ ‘ಅರೈಸ್‌ ಅವೇಕ್‌’ ಪಾರ್ಕನ್ನು ರವಿವಾರ ಉದ್ಘಾಟಿಸಲಾಯಿತು.

ಶಾಸಕ ಜೆ.ಆರ್‌. ಲೋಬೋ ಅವರು ಪಾರ್ಕ್‌ ಉದ್ಘಾಟಿಸಿದರು. ಮನಸ್ಸಿನ ಸ್ವಚ್ಛತೆಯಿಂದ ಎಲ್ಲವೂ ಸಾಧ್ಯವಾಗುತ್ತದೆ. ರಾಮಕೃಷ್ಣ ಮಠದವರು ಮಾಡುತ್ತಿರುವ ಸ್ವಚ್ಛತಾ ಅಭಿಯಾನ ಸಾಕಷ್ಟು ಮಂದಿಯ ಮನಸ್ಸು ಪರಿವರ್ತನೆಯ ಜತೆಯಲ್ಲಿ ಜಾಗೃತಿಯನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದ ಸ್ವಾಮೀಜಿ ಮಾತನಾಡಿ, ನಗರದಲ್ಲಿ ಕಸ ಬೀಳುವ ಜಾಗದಲ್ಲಿ ಪಾರ್ಕ್‌ ಗಳು ಎದ್ದುನಿಲ್ಲಬೇಕು. ಮಂಗಳೂರು ಬರೀ ಸ್ವಚ್ಛ ನಗರಿಯಾಗುವ ಜತೆಯಲ್ಲಿ ಸೌಂದರ್ಯ ನಗರಿಕೂಡ ಮಾಡಬೇಕು ಎಂದರು.

 

ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾನದ ಸಂಚಾಲಕರಾದ ಸ್ವಾಮಿ ಏಕಗಮ್ಯಾನಂದ, ವಿಧಾನ ಪರಿಷತ್‌ನ ವಿಪಕ್ಷದ ಮುಖ್ಯ ಸಚೇತಕ ಕ್ಯಾ|ಗಣೇಶ್‌ ಕಾರ್ಣಿಕ್‌ ಮಾತನಾಡಿದರು. ಕಾರ್ಪೊರೇಟರ್‌ ಪ್ರಕಾಶ್‌ ಬಿ. ಸಾಲ್ಯಾನ್‌, ಮಾಜಿ ಉಪಮೇಯರ್‌ ರಜನೀಶ್‌ ಕಾಪಿಕಾಡ್‌, ಎಂಆರ್‌ಪಿಎಲ್‌ ಸಂಸ್ಥೆಯ ಪ್ರಶಾಂತ್‌ ಬಾಳಿಗ, ಪವನ ಅಪಾರ್ಟ್‌ಮೆಂಟ್‌ನ
ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು. ಈ ಬಳಿಕ ಕರಂಗಲಪಾಡಿ ಸುತ್ತಮುತ್ತ ರಾಮಕೃಷ್ಣ ಮಠದ ಸ್ವಚ್ಛತಾ ಅಭಿಯಾನ ಕಾರ್ಯ ನಡೆಯಿತು.

 

220 ಅಡಿ ಉದ್ದದ ದುಂಡು ಕಲ್ಲುಗಳನ್ನು ಜೋಡಿಸಿ ಅಕ್ಯುಪ್ರಶರ್‌ ವಾಕಿಂಗ್‌ ಟ್ರಾಕ್‌ ಅಳವಡಿಸಲಾಗಿದೆ. ಮಧ್ಯದಲ್ಲಿ ಎಲ್‌ ಇಡಿಡಿ ಬಳಸಿ ಕಾರಂಜಿ, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಗಾರ್ಡನ್‌, ಹುಲ್ಲಿನ ಲಾನ್‌ ಹಾಗೂ ವಿದ್ಯುತ್‌ ದೀಪ ಮತ್ತಿತರ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಹೊರ ಭಾಗದಲ್ಲಿ ಬೃಹತ್‌ ಕಾಂಕ್ರೀಟ್‌ ಬಳಸಿ ಮಾಡಿರುವ ಅಕ್ಷರಗಳು ಕಣ್ಸೆಳೆಯುತ್ತವೆ. ಜತೆಗೆ ಹೊರಭಾಗದಲ್ಲಿ ಪುಟ್‌ಪಾತ್‌ ಮಾಡಲಾಗಿದೆ. ಪಾರ್ಕಿಗೆ ಬರುವವರಿಗೆ ಪಾರ್ಕಿಂಗ್‌ ವ್ಯವಸ್ಥೆಗೆ ಅನುಕೂಲ ಮಾಡಿ ಕೊಡಲಾಗಿದೆ. ಪಾರ್ಕಿನ ವೆಚ್ಚವನ್ನು ಎಂಆರ್‌ಪಿಎಲ್‌ ಸಂಸ್ಥೆ ಭರಿಸಿದ್ದು, ಪಾಲಿಕೆಯಿಂದ ಇಂಟರ್‌ ಲಾಕ್‌, ಪುಟ್‌ ಪಾತ್‌ ಮಾಡಿಸಲಾಗಿದೆ.

ಅಕ್ಯುಪ್ರಶರ್‌ ವಾಕಿಂಗ್‌ ಟ್ರಾಕ್‌ :


ಅಕ್ಯುಪ್ರಶರ್‌ ವಾಕಿಂಗ್‌ ಟ್ರಾಕ್‌ ಎಂದರೆ ಚಿಕ್ಕ ಪುಟ್ಟ ನುಣುಪಾದ ಕಲ್ಲುಗಳನ್ನು ವ್ಯವಸ್ಥಿತವಾಗಿ ದಾರಿಗೆ ಜೋಡಿಸಿ ಮಾಡಿದ ಪಥ. ಈ ಟ್ರಾಕಿನಲ್ಲಿ ಬರಿಗಾಲಿನಲ್ಲಿ ನಡೆಯುವುದೇ ವಿಶೇಷ. ಇದರಿಂದ ಪಾದಗಳಿಗೆ ಒಂದು ತೆರನಾದ ವ್ಯಾಯಾಮ ದೊರೆಯುವುದರ ಜತೆಗೆ ಕಲ್ಲುಗಳು ಪಾದಕ್ಕೆ ಒತ್ತುವುದರಿಂದ ರಕ್ತ ಪರಿಚಾಲನೆಗೂ ಸಹಕಾರಿಯಾಗುತ್ತದೆ. ಅಕ್ಯುಪ್ರಶ್ಶರ್‌ ಟ್ರಾಕ್‌ನಲ್ಲಿ ನಡೆಯುವಂತೆ ಕೆಲವರಿಗೆ ವೈದ್ಯರೂ ಸೂಚಿಸುವುದು ಇದೆ. ಇಂತಹ ಸೌಲ್ಯಭವನ್ನು ನಗರದ ಜನತೆಗೆ ಒದಗಿಸಬೇಕೆಂಬ ಆಶಯದಿಂದ ಇದನ್ನು ನಿರ್ಮಿಸಲಾಗಿದೆ. ಇದರ ಪಕ್ಕದಲ್ಲಿ ಮತ್ತೂಂದು ಪಥವಿದ್ದು ಇದು ಸಾಮಾನ್ಯ ನಡಿಗೆಗೆ ಉಪಯೋಗಿಸಬಹುದಾಗಿದೆ ಎಂದು ಸ್ವಾಮಿ ಏಕಗಮ್ಯಾನಂದ ಹೇಳಿದರು.